ಸಹಸ್ರಾರು ಭಕ್ತರ ಭವ್ಯ ಶೋಭಾಯಾತ್ರೆಯೊಂದಿಗೆ 21 ದಿನಗಳ ಹಿಂದೂ ಮಹಾಗಣಪತಿ ವಿಸರ್ಜನೆ
ಕಲಬುರಗಿ:ಸೆ.27: ಗಣೇಶೋತ್ಸವದಂದು ಪ್ರತಿಷ್ಠಾಪಿಸಲ್ಪಟ್ಟ ನಗರದ ಪ್ರತಿಷ್ಠಿತ ಕೋಟೆ ಎದುರುಗಡೆ ಇರುವ ಹಿಂದೂ ಮಹಾಗಣಪತಿಯ ಭವ್ಯ ಶೋಭಾಯಾತ್ರೆಯೊಂದಿಗೆ ಸಹಸ್ರಾರು ಭಕ್ತರ ಸಂಭ್ರಮದೊಂದಿಗೆ ಶುಕ್ರವಾರ ಗಣಪತಿ ವಿಸರ್ಜನೆಯು ಶಾಂತಿಯುತವಾಗಿ ಜರುಗಿತು.
ಭವ್ಯ ರಾಮಮಂದಿರದ ಶೈಲಿಯ ಮಂಟಪದಲ್ಲಿ ಶ್ರೀರಾಮನ ಅವತಾರದಲ್ಲಿ ಶ್ರೀ ಗಣೇಶನಿಗೆ ಕಳೆದ 21 ದಿನಗಳ ಕಾಲ ಪೂಜೆ ಸಲ್ಲಿಸಲಾಯಿತು. ಅನೇಕ ಮಹಾನ್ ನಾಯಕರಿಗೆ ಆಹ್ವಾನಿಸಿ ಅವರಿಂದ ವಿಶೇಷ ಉಪನ್ಯಾಸವನ್ನು ಮಾಡಿಸಲಾಯಿತು. ರಾಷ್ಟ್ರೀಯ ಚಿಂತಕ ಸುಲಿಬೆಲೆ ಚಕ್ರವರ್ತಿ ಹಾಗೂ ಹೈದ್ರಾಬಾದ್‍ನ ಬಿಜೆಪಿ ನಾಯಕಿ ಮಾಧವಿ ಲತಾ ಅವರು ಈ ಬಾರಿಯ ಭಾಷಣಕಾರರಲ್ಲಿ ಪ್ರಮುಖರಾಗಿದ್ದರು.
ಬೆಳಿಗ್ಗೆ 11 ಗಂಟೆಗೆ ಆರಂಭವಾದ ಈ ಶೋಭಾ ಯಾತ್ರೆಯಲ್ಲಿ ಡಿಜೆ, ಡೊಳ್ಳು, ಸೇರಿದಂತೆ ಅನೇಕ ವಾದ್ಯ ವೃಂದಗಳೊಂದಿಗೆ ಮೆರವಣಿಗೆಯು ಪ್ರಕಾಶ್ ಮಾಲ್‍ನಿಂದ ಲೋಹಾರ್ ಗಲ್ಲಿ ಮಾರ್ಗ, ಹುಮ್ನಾಬಾದ್ ಬೇಸ್, ಕಿರಾಣಾ ಬಜಾರ್, ಕಪಡಾ ಬಜರಾ, ಚಪ್ಪಲ್ ಬಜಾರ್, ಹೂವಿನ ಮಾರುಕಟ್ಟೆ, ಹಳೆ ಮಾರುಕಟ್ಟೆ ಮಾರ್ಗವಾಗಿ ಸೂಪರ್ ಮಾರ್ಕೇಟ್, ತಹಸಿಲ್ ಕಚೇರಿ, ಗಾಜೀಪೂರ ಮುಖ್ಯರಸ್ತೆ, ಜಗತ್ ಮಾರ್ಗವಾಗಿ ಅಪ್ಪನ ಕೆರೆಯ ವಿಸರ್ಜನಾ ಭಾವಿಯವರೆಗೆ ಮರೆವಣಿಗೆ ನಡೆದು, ನಂತರ ವಿಸರ್ಜಿಸಲಾಯಿತು.
ಸಂಜೆ ಆರು ಗಂಟೆಯಾಗುತ್ತಲೇ ಪೆÇೀಲಿಸರು ನೀಡಿದ ಅನುಮತಿ ಸಮಯ ಮುಕ್ತಾಯದ ನಂತರ ಎಲ್ಲ ವಾದ್ಯಗಳನ್ನು ಬಂದ್ ಮಾಡಿಸಿ, ಶ್ರೀ ಗಣೇಶನ ವಿಗ್ರಹದ ಮೆರವಣಿಗೆಯಲ್ಲಿ ಸಾವಿರಾರು ಭಕ್ತಾದಿಗಳು, ಮೂಕರಂತೆ ಮೆರವಣಿಗೆಯಲ್ಲಿ ಮುನ್ನಡೆಯುತ್ತಿದ್ದುದು ವಿಶೇಷವಾಗಿತ್ತು.
ಮರವಣಿಗೆ ನಡೆಯುತ್ತಿದ್ದ ರಸ್ತೆಯಲ್ಲಿ ಸಂಚಾರಿ ಪೆÇೀಲಿಸರು ಉತ್ತಮ ಕಾರ್ಯನಿರ್ವಹಿಸಿ, ಎಲ್ಲಡೆ ಬ್ಯಾರಿಕೆಡ್ ಹಾಕಿ ರಸ್ತೆಯನ್ನು ಬಂದ್ ಮಾಡಿ, ಬೇರೆಡೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮೆರವಣಿಗೆಯಲ್ಲಿ ಹಿಂದು ಮಹಾಗಣಪತಿ ಸಮಿತಿ ಅಧ್ಯಕ್ಷ ನಾಗೇಂದ್ರ ತಾಬಡೆ, ಸಮಿತಿಯ ಸದಸ್ಯರುಗಳಾದ ಸಿದ್ಧರಾಜ್ ಬಿರಾದಾರ್, ಸುರೇಶ್ ಟೇಂಗಳಿ, ಸಂಜಯ್ ರೇವಣಕರ್ ಸೇರಿದಂತೆ ಸಮಿತಿಯ ಎಲ್ಲ ಸದಸ್ಯರುಗಳು, ಪದಾಧಿಕಾರಿಗಳು, ಅಭಿಮಾನಿಗಳು ಭಾಗವಹಿಸಿದ್ದರು. ಭವ್ಯ ಶೋಭಾ ಯಾತ್ರೆಯನ್ನು ನಾಗರಿಕರು ನೋಡಿ ಕಣ್ತುಂಬಿಕೊಂಡರು.