ಸ್ವಚ್ಚತೆಯಿಂದ ಸದೃಢ ಆರೋಗ್ಯ, ಸ್ವಸ್ಥ ಸಮಾಜ ಸಾಧ್ಯ
ಕಲಬುರಗಿ:ಸೆ.27:ಮಾನವನಿಗೆ ಬರುವ ಸಾಮಾನ್ಯ ಖಾಯಿಲೆಗಳಿಗೆ ಅನೈರ್ಮಲತೆ ಪ್ರಮುಖ ಕಾರಣವಾಗಿದೆ. ವೈಯಕ್ತಿಕ ಹಾಗೂ ಸಾರ್ವಜನಿಕ ಸ್ವಚ್ಚತೆ ಕಾಪಾಡುವುದರಿಂದ ವ್ಯಕ್ತಿ ಆರೋಗ್ಯವಾಗುವುದರ ಜೊತೆಗೆ ಸ್ವಸ್ಥ್ಯ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಎಸ್‍ಡಿಆರ್‍ಎಫ್ ಇನ್ಸಪೆಕ್ಟರ್ ಅಂಬರೀಶ್ ಚವ್ಹಾಣ ಹೇಳಿದರು.
ನಗರದ ಪೋಲಿಸ್ ಕಾಲನಿಯ ಎಸ್.ಡಿ.ಆರ್.ಎಫ್ ಕಚೇರಿ ಆವರಣದಲ್ಲಿ ‘ನೆಹರು ಯುವ ಕೇಂದ್ರ’ ಮತ್ತು ‘ಗೌತಮ ಯುವಜನ ಸಾಂಸ್ಕøತಿಕ ಸೇವಾ ಸಂಘ’ ಇವುಗಳ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಪ್ರಯುಕ್ತ ಶುಕ್ರವಾರ ಏರ್ಪಡಿಸಲಾಗಿದ್ದ ‘ಸ್ವಚ್ಛತೆಯೇ ಸೇವೆ’ ವಿಶೇಷ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಪರ ಹೋರಾಟಗಾರ ಮಂಜುನಾಥ ನಾಲವಾರಕರ್ ಮಾತನಾಡಿ, ಸ್ವಚ್ಛತೆ ಕೇವಲ ಸರ್ಕಾರ, ಪೌರ ಕಾರ್ಮಿಕರು, ಕೆಲವು ಸಂಘ-ಸಂಸ್ಥೆಗಳ ಕಾರ್ಯವಾಗದೆ ಸಾಮೂಹಿಕ ಜವಾಬ್ದಾರಿಯಾಗಿದೆ. ಮನೆ ಹಾಗೂ ಸುತ್ತ-ಮುತ್ತಲಿನ ಪರಿಸರದ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಬಯಲು ಶೌಚಾಲಯ ಎಂದಿಗೂ ಬೇಡ. ಪ್ಲಾಸಿಕ್‍ಗೆ ಪರ್ಯಾಯ ಬಳಕೆ ಅಗತ್ಯವಾಗಿದೆ ಎಂದರು.
ಉಪನ್ಯಾಸಕ ಎಚ್.ಬಿ.ಪಾಟೀಲ ವಿಶೇಷ ಉಪನ್ಯಾಸ ನೀಡಿದರು. ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಗೌತಮ ಯುವಜನ ಸಾಂಸ್ಕøತಿಕ ಸೇವಾ ಸಂಸ್ಥೆಯ ಗೌರವ ಸಲಹೆಗಾರ ಹಾಗೂ ನ್ಯಾಯವಾದಿ ಧೂಳಪ್ಪ ದ್ಯಾಮನಕರ್, ಚಿಂತಕ ಆನಂದ ಕಪನೂರ, ಎಸ್.ಡಿ.ಆರ್.ಎಫ್ ಸಿಬ್ಬಂದಿಗಳಾದ ಶಿವಾನಂದ ಜಗದೆ, ಪ್ರಕಾಶ ಕಟ್ಟಿಮನಿ, ಅಜಗಪ್ಪ ಬಿರಾದಾರ ಸೇರಿದಂತೆ ಇನ್ನಿತರರಿದ್ದರು.