ಬಿಬಿಎಂಪಿ ಸಹಾಯಕ ಆಯುಕ್ತ ಮಗ್ಗಿ ನಿವಾಸದ ಮೇಲೆ ಲೋಕಾಯುಕ್ತರ ದಾಳಿ:ಹುಲಿ ಉಗುರು, ಕ್ಯಾಸಿನೊ ಕಾಯಿನ್‍ಗಳು ಪತ್ತೆ
ಕಲಬುರಗಿ:ಜು.11:ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ ಮಹಾದೇವಪುರ ವಿಭಾಗದ ಸಹಾಯಕ ಆಯುಕ್ತ ಬಸವರಾಜ್ ಮಗ್ಗಿ ಅವರ ಮನೆಗಳ ಮೇಲೆ ಲೋಕಾಯುಕ್ತರು ಗುರುವಾರ ದಾಳಿ ಮಾಡಿದ್ದು, ಬೆಳಿಗ್ಗೆ ಮನೆಯಲ್ಲಿ ಸುಮಾರು 12.50 ಲಕ್ಷ ರೂ.ಗಳ ಮೌಲ್ಯದ ಕ್ಯಾಸಿನೊ ಕಾಯಿನ್‍ಗಳು ಪತ್ತೆಯಾದ ಬೆನ್ನಲ್ಲೆ ಸ್ಥಳೀಯ ಲೋಕಾಯುಕ್ತರು ಕಾರ್ಯಾಚರಣೆ ಕೈಗೊಂಡಾಗ ನಗರದ ಅವರ ನಿವಾಸದಲ್ಲಿ ಕ್ಯಾಸಿನೊ ಕಾಯಿನ್‍ಗಳ ಮತ್ತೊಂದು ಸೂಟ್‍ಕೇಸ್ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ತಾಲ್ಲೂಕಿನ ಪಾಳಾ ಗ್ರಾಮದ ಮನೆ ಮತ್ತು ನಗರದ ಮನೆ ಮತ್ತು ಬೆಂಗಳೂರು ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲಾತಿ ಪರಿಶೀಲನೆ ಮಾಡಿದರು. ಬಸವರಾಜ್ ಮಗ್ಗಿ ಅವರ ಮನೆಯಲ್ಲಿ ಲೋಕಾಯುಕ್ತ ಎಸ್.ಪಿ ಜಾನ್ ಆಂಟೋನಿ ಅವರ ನೇತೃತ್ವದ ಅಧಿಕಾರಿಗಳ ತಂಡ ಬೆಳಿಗ್ಗೆಯಿಂದ ಕಡತಗಳ ಪರಿಶೀಲನೆ, ಮನೆಯ ತಪಾಸಣೆ ಮಾಡಿತು.
ಸುಮಾರು 12.50 ಲಕ್ಷ ರೂ.ಗಳ ಮೌಲ್ಯದ ಕ್ಯಾಸಿನೊ ಕಾಯಿನ್‍ಗಳು ಪತ್ತೆಯಾಗಿವೆ. ಈಗ ಸೂಟ್‍ಕೇಸ್‍ನಲ್ಲಿ ಸುಮಾರು 50 ಸಾವಿರ ರೂ.ಗಳಿಂದ 1 ಲಕ್ಷ ಮೌಲ್ಯದವರೆಗಿನ ಕ್ಯಾಸಿನೊ ಕ್ವಾಯಿನ್‍ಗಳು ಸಿಕ್ಕಿವೆ ಎಂದು ತಿಳಿದುಬಂದಿದೆ.
ಸೂಟ್‍ಕೇಸ್‍ನಲ್ಲಿ ನೀಟಾಗಿ ಜೋಡಿಸಿ ಇಟ್ಟಿರುವ ಕ್ಯಾಸಿನೊ ಕಾಯಿನ್‍ಗಳ ಮೌಲ್ಯವನ್ನು ಲೆಕ್ಕಹಾಕಲಾಗುತ್ತಿದೆ. ದಾಖಲೆಗಳ ತಪಾಸಣೆಯ ವೇಳೆ ಎರಡು ಹುಲಿ ಉಗುರುಗಳೂ ಸಹ ಸಿಕ್ಕಿವೆ. ಹುಲಿ ಉಗುರಿನ ಸತ್ಯಾಸತ್ಯತೆ ತಿಳಿಯಲು ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆಯಿಸಲಾಗಿದೆ ಎಂದು ಮೂಲಗಳು ಹೇಳಿವೆ. ಡಿಎಸ್‍ಪಿ. ಮಂಜುನಾಥ್, ಇನ್‍ಸ್ಪೆಕ್ಟರ್ ಹನುಮಂತ್ ಸನ್ಮನಿ ಸೇರಿದಂತೆ ಪೆÇಲೀಸ್ ಸಿಬ್ಬಂದಿಗಳು ದಾಳಿ ಮಾಡಿದರು.