ಮುಡಾ ಹಗರಣ ಸಿಬಿಐಗೆ ವಹಿಸಿ : ಕೂಚಬಾಳ ಆಗ್ರಹ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.12: ಮುಡಾ ಹಗರಣವನ್ನು ಸಿಬಿಐ ಇಲ್ಲವೆ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಆಗ್ರಹಿಸಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಕಬಳಿಕೆಯ ಅಕ್ರಮದಲ್ಲಿ ಯಾರು ತೊಡಗಿಕೊಂಡಿದ್ದಾರೆಯೋ ಅವರ ಮೇಲೆ ಕಾನೂನು ಕ್ರಮವಾಗಬೇಕು. ಈಗಾಗಲೇ ಬಿಜೆಪಿಯಿಂದ ಅನೇಕ ಹೋರಾಟಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು.
ಎಸ್‍ಐಟಿ ತನಿಖೆಯು ಸಮರ್ಪಕವಾಗಿಲ್ಲ, ಸಮಗ್ರ ತನಿಖೆ ನಡೆಸಲು ಎಸ್‍ಐಟಿಯಿಂದ ಸಾಧ್ಯವಿಲ್ಲ. ಇವರಿಂದ ರಾಜ್ಯದ ಜನತೆಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಹೀಗಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ಕಂಡು ಬಂದ ಹಗರಣಗಳೆಲ್ಲವನ್ನೂ ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದರು. ಮುಂದಿನ ದಿನಗಳಲ್ಲಿ ಸಾಮಾನ್ಯ ಜನರಿಗೆ ಬಿಜೆಪಿ ವತಿಯಿಂದ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕÀ ಸೋಮನಗೌಡ ಪಾಟೀಲ ಸಾಸನೂರ, ಮುಖಂಡರಾದ ಕಾಸುಗೌಡ ಬಿರಾದಾರ, ಸಂಜೀವ ಐಹೊಳ್ಳೆ, ಸಂಜಯ ಪಾಟೀಲ ಕನಮಡಿ, ಮಳುಗೌಡ ಪಾಟೀಲ, ವಿಜಯ ಜೋಶಿ, ಶರಣಬಸವ ಕುಂಬಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.