ಉತ್ತಮ ನಾಗರಿಕ ಗುಣಗಳನ್ನು ಬೆಳೆಸುವ ಎನ್.ಎಸ್.ಎಸ್. ಕಾರ್ಯ ಶ್ಲಾಘನೀಯ: ಸಿದ್ದಣ್ಣ ಸಕ್ರಿ
ಸಂಜೆವಾಣಿ ವಾರ್ತೆ.
ವಿಜಯಪುರ,ಜು.12:ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠವಾಗಲು ಉತ್ತಮ ನಾಗರಿಕರು ಅವಶ್ಯ. ಅಂತಹ ಉತ್ತಮ ನಾಗರಿಕ ಗುಣಗಳನ್ನು ಬೆಳೆಸುವ ಕೆಲಸವನ್ನು ಎನ್.ಎಸ್.ಎಸ್. ಶಿಬಿರಗಳು ಮಾಡುತ್ತವೆ. ವಿದ್ಯಾರ್ಥಿಗಳಿಗೆ ಸತ್ಪ್ರಜೆಗಳಾಗುವ ದಾರಿ ತೋರಿಸುವ ಎನ್.ಎಸ್.ಎಸ್. ಕಾರ್ಯ ಶ್ಲಾಘನೀಯ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಸಿದ್ದಣ್ಣ ಸಕ್ರಿ ಹೇಳಿದರು.
ನಗರದ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್. ಘಟಕ-1 ಮತ್ತು 2 ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇವುಗಳ ಸಹಯೋಗದಲ್ಲಿ ಬುರಣಾಪೂರ ಗ್ರಾಮದಲ್ಲಿ ಹಮ್ಮಿಕೊಂಡ 2023-24ನೇ ಸಾಲಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಎನ್.ಎಸ್.ಎಸ್, ಎನ್.ಸಿ.ಸಿ.ಗಳಲ್ಲಿ ಕಾರ್ಯ ನಿರ್ವಹಿಸುವಂತೆ ಪ್ರೇರೇಪಿಸಬೇಕು. ಹಳ್ಳಿಯ ಸಮಸ್ಯೆ ಜೀವನ ಅರಿಯಲು ಮತ್ತು ಗ್ರಾಮೀಣ ಸೇವೆ ಮಾಡಲು ಶಿಬಿರಗಳು ಸಹಕಾರಿಯಾಗಿವೆ ಎಂದರು.
ಭಾರತ ಸ್ಕೌಟ್ಸ್ & ಗೈಡ್ಸ್ ಜಿಲ್ಲಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಶರಣು ಸಬರದ ಮುಖ್ಯ ಅತಿಥಿಗಳಾಗಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಬದುಕಿನ ಪಾಠವನ್ನು ಕಲಿಸುತ್ತದೆ. ದೇಶಾಭಿಮಾನ, ಸಮಾಜ ಸೇವೆ, ಸ್ವಚ್ಚತೆ, ಸಹೋದರತೆಯ ಮಹತ್ವವನ್ನು ಶಿಬಿರಗಳು ತಿಳಿಸುತ್ತವೆ. ವಿದ್ಯಾರ್ಥಿಗಳು ಮಾರಕವಾಗುವ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಬುರಣಾಪೂರ ಆರೂಢಾಶ್ರಮದ ಪೂಜ್ಯ ಯೋಗೇಶ್ವರಿ ಮಾತಾಜಿ ಮಾತನಾಡಿ, ವಿದ್ಯಾರ್ಥಿಗಳು ಭಾರತೀಯ ಸಂಸ್ಕøತಿ ಮತ್ತು ವಿಚಾರಗಳನ್ನು ಮೈಗೂಢಿಸಿಕೊಳ್ಳಬೇಕು. ಬದುಕಿನಲ್ಲಿ ಬದಲಾವಣೆ ತರುವ ಕೆಲಸ ಎನ್.ಎಸ್.ಎಸ್. ಮಾಡುತ್ತದೆ. ಮಾತೃತ್ವ ಭಾವನೆ, ಸಹೋದರ ಭಾವನೆ ಮೂಡಿಸುವ ಕೆಲಸವನ್ನು ಎನ್.ಎಸ್.ಎಸ್. ಶಿಬಿರಗಳು ಮಾಡಿಸುತ್ತವೆ ಎಂದರು.
ವೇದಿಕೆಯಲ್ಲಿದ್ದ ಬುರಣಾಪೂರ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ರಾಜೇಶ ಟಿ. ಹಾಗೂ ಪಂಚಾಯತ ಅಭಿವೃದ್ದಿ ಅಧಿಕಾರಿ ಧನಸಿಂಗ್ ರಾಠೋಡ ಮಾತನಾಡಿದರು.
ಎನ್.ಎಸ್.ಎಸ್. ಘಟಕ-1 ರ ಕಾರ್ಯಕ್ರಮಾಧಿಕಾರಿ ಪ್ರೊ. ವಿಜಯಕುಮಾರ ಸ್ವಾಗತಿಸಿದರು. ಪ್ರೊ. ಸುಭಾಸಚಂದ್ರ ಕನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎಸ್.ಎಸ್. ಘಟಕ-2 ರ ಕಾರ್ಯಕ್ರಮಾಧಿಕಾರಿ ಪ್ರೊ. ಪ್ರದೀಪ ಕುಂಬಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಶಶಾಂಕ ದೇಸಾಯಿ, ವಿವೇಕ ತಮದಡ್ಡಿ, ವಾಸಂತಿ ಗೊಳಸಾರ, ಪ್ರೀತಿ ಬಶೋರಾ, ಪ್ರೀತಿ ಮೇತ್ರಿ, ಭಾಗ್ಯಾ ಕೋಲೂರ, ಸಾಹೇಬಗೌಡ, ಪ್ರಜ್ವಲ, ಸಂಗಮೇಶ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.