ಕೇಂದ್ರ ಹಣಕಾಸು ಸಚಿವರಿಗೆ ಗ್ಯಾರಂಟಿ ಯೋಜನೆ ರದ್ದತಿಗೆ ಒತ್ತಾಯಿಸಿ ಶಾಸಕ ಯತ್ನಾಳ ಮನವಿ ಸಲ್ಲಿಕೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.12: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬುಧವಾರ ನವ ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ವಿವಿಧ ವಿಷಯಗಳ ಕುರಿತು ಚರ್ಚಿಸಿ ಮನವಿ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಬೊಕ್ಕಸಕ್ಕೆ ಆಗುವ ನಷ್ಟದ ಬಗ್ಗೆ ಸ್ವತಃ ರಾಜ್ಯ ಸರ್ಕಾರದ ವಿತ್ತ ಇಲಾಖೆ ಎಚ್ಚರಿಸಿದರೂ ಸಹ ಈ ರೀತಿಯಾದ ಯೋಜನೆಗಳನ್ನು ಅನುμÁ್ಠನಗೊಳಿ ಸಿರುವುದರಿಂದ ರಾಜ್ಯ ದಿವಾಳಿ ಆಗುವುದರ ಬಗ್ಗೆ ವಿತ್ತ ಸಚಿವರಿಗೆ ತಿಳಿಸಿ, ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ಬಳಸಿ ಕೂಡಲೇ ಫಿಸ್ಕಲ್ ರೆಸ್ಪಾನ್ಸಿಬಿಲಿಟಿ ಅಂಡ್ ಬಜೆಟ್ ಮ್ಯಾನೇಜ್ಮೆಂಟ್ ಆಕ್ಟ್ ಕಾಯ್ದೆಯಡಿ ರಾಜ್ಯ ಸರ್ಕಾರದ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಲಾಯಿತು.
ಇದಲ್ಲದೆ, ಅಕ್ಕಿ ವಿತರಣೆಯಲ್ಲೂ ರಾಜ್ಯ ತಪ್ಪು ಹೆಜ್ಜೆ ಇಡುತ್ತಿದೆ. ದೇಶದಲ್ಲಿ ಅತೀ ಹೆಚ್ಚು ಬಿ.ಪಿ.ಎಲ್ ಕಾರ್ಡ್ ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಆದರೆ, ಎಷ್ಟು ಬೋಗಸ್ ಕಾರ್ಡ್‍ಗಳು ವಿತರಣೆಯಾಗಿವೆ ಎಂಬ ಆಡಿಟ್ ಇದುವರೆಗೂ ಆಗಿಲ್ಲ. ಬಡತನ ರೇಖೆಗಿಂತ ಮೇಲೆ ಇರುವವರೇ ಹೆಚ್ಚು ಬಿ.ಪಿ.ಎಲ್ ಕಾರ್ಡ್ ಹೊಂದಿದ್ದಾರೆ. ಸರ್ಕಾರ ಇವರ ಮೇಲೆ ಕ್ರಮ ಕೈಗೊಳ್ಳದೇ, ಎಲ್ಲರಿಗೂ ಉಚಿತ ಅಕ್ಕಿ ನೀಡುತ್ತಿದೆ ಎಂದೂ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ನೀಡಿರುವ ವರದಿಯನ್ನು ತೋರಿಸಿ ವಿವರಿಸಿದರು.
ಅತ್ಯಂತ ತಾಳ್ಮೆಯಿಂದ ಆಲಿಸಿದ ಸಚಿವರು, ವಿವರಗಳನ್ನು ಪರಿಶೀಲಿಸಿ ಈ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆಂದು ಶಾಸಕರು ತಿಳಿಸಿದ್ದಾರೆ.