ಜನಸಂಖ್ಯೆಯನ್ನು ನಿಯಂತ್ರಿಸಿ ಅಭಿವೃದ್ಧಿ ಸಾಧಿಸಿ: ಪಾರ್ವತಿ ಕುರ್ಲೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.12:ನಗರ ಹೊರವಲಯದ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದಲ್ಲಿ ವಿಶ್ವ ಜನಸಂಖ್ಯಾ ದಿನಾಚಾರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದ ಧಾರವಾಡ ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯೆ ಪಾರ್ವತಿ ಕುರ್ಲೆ ಮಾತನಾಡಿ, ಪ್ರತಿ ವರ್ಷ ಜು. 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅದಕ್ಕೆ ಸಂಬಂಧಿಸಿದ ಸವಾಲುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇತ್ತಿಚೀನ ದಿನಗಳಲ್ಲಿ ಜಾಗತಿಕ ಜನಸಂಖ್ಯೆಯು ಗಮನಾರ್ಹವಾಗಿ ಬೆಳೆಯುತ್ತಿದೆ. ಇದು ಮುಖ್ಯವಾಗಿ ಮನುಷ್ಯನ ಜೀವಿತಾವಧಿಯಲ್ಲಿನ ಹೆಚ್ಚಳ, ಫಲವತ್ತತೆಯಲ್ಲಿನ ಬದಲಾವಣೆಗಳು, ನಗರೀಕರಣ ಮತ್ತು ವಲಸೆಯಂತಹ ಅಂಶಗಳು ಜನಸಂಖ್ಯಾ ಹೆಚ್ಚಳದ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ ಎಂದರು. ಜನಸಂಖ್ಯೆ ಹೆಚ್ಚಳ ಅರ್ಥಿಕ ಬೆಳವಣಿಗೆ, ಉದ್ಯೋಗ, ಆದಾಯ ವಿತರಣೆ, ಬಡತನ ಮತ್ತು ಸಾಮಾಜಿಕ ಕಲ್ಯಾಣದ ಮೇಲೆ ಪರಿಣಾಮ ಬೀರುತ್ತದೆ. ಕಾರಣ ಜನಸಂಖ್ಯೆಯನ್ನು ನಿಯಂತ್ರಿಸಿ ಅಭಿವೃದ್ಧಿಯನ್ನು ಸಾಧಿಸಬೇಕಾದ ಸವಾಲುಗಳು ನಮ್ಮ ಮುಂದೆ ಇವೆ ಎಂದು ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿ ಹಾಗೂ ಹಿಂದಿನ ವ್ಯವಸ್ಥಾಪನಾ ಮಂಡಳಿ ಸದಸ್ಯ ಸುರೇಶ ಗೊಣಸಗಿ ಮಾತನಾಡಿ, ಈ ಸಲದ ವಿಶ್ವ ಜನಸಂಖ್ಯಾ ದಿನದ ಥೀಮ್ ದತ್ತಾಂಶ ಸಂಗ್ರಹಣೆಯಲ್ಲಿ ಹೂಡಿಕೆ ಮಾಡುವುದು, ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು, ಪರಿಹಾರಗಳನ್ನು ಹೊಂದಿಸಲು ಮತ್ತು ಪ್ರಗತಿಯನ್ನು ಚಾಲನೆಯನ್ನು ಮಾಡಲು ಮುಖ್ಯವಾಗಿದೆ ಎಂದರು.
ಕಳೆದ 30 ವರ್ಷಗಳಲ್ಲಿ ವಿಶ್ವದಾದ್ಯಂತ ದೇಶಗಳು ಜನಸಂಖ್ಯಾ ದತ್ತಾಂಶ ಸಂಗ್ರಹಣೆ, ವಿಶ್ಲೇಷಣೆ ಮತ್ತು ಬಳಕೆಯಲ್ಲಿ ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ ಎಂದು ತಿಳಿಸಿದರು.
ಹೊಸ ಜನಸಂಖ್ಯೆಯ ಅಂದಾಜುಗಳು, ವಯಸ್ಸು, ಜನಾಂಗೀಯತೆ, ಲಿಂಗ ಮತ್ತು ಇತರ ಮಾನದಂಡಗಳಿಂದ ವಿಂಗಡಿಸಲಾಗಿದ್ದು, ಇವು ನಮ್ಮ ಸಮಾಜದ ವೈವಿಧ್ಯತೆಯನ್ನು ಹೆಚ್ಚು ನಿಖರವಾಗಿ ಪ್ರತಿಬಿಂಬಿಸುತ್ತವೆ ಎಂದರು.
ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಜನಸಂಖ್ಯೆ ಹೆಚ್ಚಳದಿಂದ ಆಹಾರ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತದೆ. ಏಕೆಂದರೆ ಜನಸಂಖ್ಯೆ ಹೆಚ್ಚಾದಂತೆ ಲಭ್ಯವಿರುವ ಜಮೀನಿನಲ್ಲಿ ಆಧುನಿಕ ತಾಂತ್ರಿಕತೆ ಬಳಸಿ ಆಹಾರ ಉತ್ಪಾದನೆ ಹೆಚ್ಚು ಮಾಡುವ ಜವಾಬ್ದಾರಿ ಕೃಷಿ ವಿಜ್ಞಾನಿಗಳ ಮೇಲಿದ್ದು, ಇದರಿಂದ ಕೃಷಿ ಅಭಿವೃದ್ಧಿ ಮೇಲೆ ಪರಿಣಾಮವಾಗುವ ಸಾದ್ಯತೆ ಇರುವುದರಿಂದ ಜನಸಂಖ್ಯೆ ನಿಯಂತ್ರಣಕ್ಕೆ ಜಾಗ್ರತೆ ಮೂಡಿಸುವ ಅನಿವಾರ್ಯತೆಯಿದೆ ಎಂದರು.
ಡಾ. ಬಸವರಾಜ ಬೀಳೂರ ಜನಸಂಖ್ಯಾ ನಿಯಂತ್ರಣ ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ ಡೀನ್ ಡಾ. ಎ. ಭೀಮಪ್ಪ ಮಾತನಾಡಿ, ಭಾರಿ ಪ್ರಮಾಣದ ಜನಸಂಖ್ಯೆ ಏರಿಕೆ ಮತ್ತು ಜನಸಂಖ್ಯಾ ಸ್ಪೋಟದಿಂದಾಗುವ ಅಪಾಯಗಳ ಕುರಿತು ಸವಾಲುಗಳನ್ನು ವಿಶ್ವ ಜನಸಂಖ್ಯಾ ದಿನ ನೆನಪಿಸಿಕೊಡುತ್ತದೆ ಎಂದರು. ಆರೋಗ್ಯಕರ ಜೀವನ ಮತ್ತು ಸಣ್ಣ ಕುಟುಂಬಗಳ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಮಾನವ ಹಕ್ಕುಗಳು ಮತ್ತಿತರ ಸಂಗತಿಗಳಲ್ಲಿ ಜಾಗ್ರತೆ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಕಾರಣ ವಿದ್ಯಾರ್ಥಿಗಳಲ್ಲಿ ಹಾಗೂ ಯುವ ಸಿಬ್ಬಂದಿಗಳಲ್ಲಿ ಈ ಕಾರ್ಯಕ್ರಮವನ್ನು ಆಚರಿಸಿ, ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಆಶಯ ಹೊಂದಲಾಗಿದೆ ಎಂದರು.
ಡಾ. ಆರ್. ಬಿ. ಜೊಳ್ಳಿ ಸ್ವಾಗತಿಸಿದರು. ಡಾ. ಸಾವಿತ್ರಿ ಪಾಟೀಲ ನಿರೂಪಿಸಿದರು. ತುಕಾರಾಮ ಚಲವಾದಿ ವಂದಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಡಾ. ಎನ್.ಡಿ. ಸುನೀತಾ, ಡಾ. ಕಾಶೀಬಾಯಿ ಖ್ಯಾಡಗಿ, ಡಾ. ಜಿ. ಶ್ರೀನಿವಾಸಲು, ಡಾ. ಎಸ್. ಬಿ. ಜಗ್ಗಿನವರ, ಡಾ. ಎಮ್.ಬಿ. ಪಾಟೀಲ, ಡಾ. ಮಹಾಂತೇಶ ತೆಗ್ಗಿ, ಡಾ. ಎಸ್.ಎಮ್. ವಸ್ತ್ರದ, ಡಾ. ಕಿರಣಕುಮಾರ, ಡಾ. ಬಿ.ಎಸ್. ವಸ್ತ್ರದ, ಡಾ. ರಮೇಶ ಬೀರಗೆ, ಡಾ. ಕುಶಾಲ, ಡಾ. ಸಿದ್ದರಾಮ ಪಾಟೀಲ, ಡಾ. ಸುದೀಪಕುಮಾರ, ಡಾ. ವಿದ್ಯಾವತಿ ಯಡಹಳ್ಳಿ, ಡಾ. ಶ್ವೇತಾ ಮಣ್ಣಿಕೇರಿ, ಶಿಕ್ಷಕೇತರ ಸಿಬ್ಬಂದಿಗಳಾದ ಎಸ್. ಸಿ.ಬಡಿಗೇರ, ಕೆ. ಎನ್.ನದಾಫ್, ಮಲ್ಲು ಕಗ್ಗೋಡ, ಶೋಭಾ ನುಚ್ಚಿ ಸೇರಿದಂತೆ ಕೃಷಿ ಕಾಲೇಜಿನ ಸಮಸ್ತ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.