ರಾಯಚೂರಿಗೆ ಏಮ್ಸ್ ಘೋಷಿಸದಿದ್ದರೆ ಆ. 6ರಂದು ದೆಹಲಿ ಜಂತರ್ ಮಂತರ್‍ನಲ್ಲಿ ಹೋರಾಟ: ದಸ್ತಿ ಎಚ್ಚರಿಕೆ
ಕಲಬುರಗಿ:ಜು.11:ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಿಂದುಳಿದ ಕಲ್ಯಾಣ ಕರ್ನಾಟಕದ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಎರಡು ಬಾರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಸಹ ಪ್ರಧಾನಿ ನಿರ್ಲಕ್ಷಿಸಿದ್ದಾರೆ. ಇದ ಜುಲೈ 23ರಂದು ಕೇಂದ್ರ ಬಜೆಟ್‍ನಲ್ಲಿ ರಾಯಚೂರಿಗೆ ಏಮ್ಸ್ ಘೋಷಿಸದೇ ಹೋದಲ್ಲಿ ಆಗಸ್ಟ್ 6ರಂದು ದೆಹಲಿಯ ಜಂತರ್ ಮಂತರ್‍ನಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳವರು ಸಂಘಟಿತ ಹೋರಾಟವನ್ನು ಮಾಡುತ್ತೇವೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ್ ದಸ್ತಿ ಅವರು ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕವು ಇಡೀ ಭಾರತದಲ್ಲಿಯೇ ಹಿಂದುಳಿದ ಪ್ರದೇಶವಾಗಿದೆ ಎಂಬುದು ಕೇಂದ್ರಕ್ಕೂ ಗೊತ್ತಿದೆ. ಡಾ. ಡಿ.ಎಂ. ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ ಐಐಟಿ ಕೊಡಬೆಕಾಗಿತ್ತು. ಆದಾಗ್ಯೂ, ಮುಂಬಯಿ ಕರ್ನಾಟಕದ ರಾಜಕಾರಣಿಗಳ ಕುತಂತ್ರದಿಂದ ಧಾರವಾಡಕ್ಕೆ ಸ್ಥಳಾಂತರವಾಗಿದೆ. ಕಳೆದ ಎರಡು ವರ್ಷಗಳಿಂದ ಏಮ್ಸ್‍ಗಾಗಿ ಹೋರಾಟ ಮಾಡಲಾಗುತ್ತಿದೆ. ಆದರೂ ಕೇಂದ್ರ ಸರ್ಕಾರವು ಹೋರಾಟಕ್ಕ ಸ್ಪಂದಿಸುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅವರು ಪ್ರಧಾನಿಯವರಿಗೆ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಕುರಿತಂತೆ ಒಂದು ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ನಾವೂ ಸಹ ಕೇಂದ್ರದ ಬಳಿಗೆ ನಿಯೋಗ ಹೋಗಿದ್ದೇವೆ. ಆದಾಗ್ಯೂ, ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಳೆದ ನಾಲ್ಕೈದು ದಿನಗಳ ಹಿಂದೆ ರಾಯಚೂರಿಗೆ ಏಮ್ಸ್ ಕೊಡಬೇಕು ಇಲ್ಲವೇ ಕಲ್ಯಾಣ ಕರ್ನಾಟಕಕ್ಕೆ ಪ್ಯಾಕೇಜ್ ಘೋಷಿಸಬೇಕು ಎಂದು ಮತ್ತೊಂದು ಪ್ರಸ್ತಾವನೆ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಪ್ರಧಾನಿಯವರು ಸ್ಪಂದಿಸಬಕು. ಜುಲೈ 23ರಂದು ಈ ಕುರಿತು ಬಜೆಟ್‍ನಲ್ಲಿ ಘೋಷಿಸಬೇಕು. ಈ ಸಂಬಂಧ ಇದೇ ಜುಲೈ 16ರಂದು ಕೇಂದ್ರ ಬಿಂದು ರಾಯಚೂರಿನಲ್ಲಿ ಉಗ್ರ ಹೋರಾಟ ಹಮ್ಮಿಕೊಂಡಿದ್ದೇವೆ. ಏಳು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಈ ಕುರಿತು ಹೋರಾಟ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
371(ಜೆ)ಗೆ ಕೆಲವರು ವಿರೋಧಿಸುತ್ತಿರುವುದನ್ನು ಖಂಡಿಸಿ ಈಗಾಗಲೇ ಕಲ್ಯಾಣ ಕರ್ನಾಟಕದಲ್ಲಿ ಒಗ್ಗಟ್ಟಿನ ಹೋರಾಟ ಮಾಡಿದ್ದವೆ. ಈಗ ಸಂಘಟಿತ ಹೋರಾಟವನ್ನು ಏಮ್ಸ್‍ಗಾಗಿ ಮಾಡಿ ರಾಜ್ಯಕ್ಕೆ, ರಾಷ್ಟ್ರಕ್ಕೆ ತೋರಿಸಿಕೊಡುತ್ತೇವೆ ಎಂದು ಹೇಳಿದ ಅವರು, ಪ್ರಧಾನಿ ನ್ಯಾಯ ಕೊಡದೇ ಇದ್ದರೆ ಬರುವ ಆಗಸ್ಟ್ ಆರರಂದು ಜಂತರ್ ಮಂತರ್‍ನಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ಕಲ್ಯಾಣ ಕರ್ನಾಟಕವು ಅಪಘಾನಿಸ್ಥಾನ್, ಪಾಕಿಸ್ತಾನ್, ಚೀನಾ, ರಶಿಯಾದಲ್ಲಿ ಇಲ್ಲ. ಭಾರತದಲ್ಲಿಯೇ ಇದ್ದು, ಹಿಂದುಳಿದ ಪ್ರದೇಶವಾಗಿದ್ದು, ಕೇಂದ್ರ ಸರ್ಕಾರ ವಿಶೇಷ ಗಮನಕೊಡಬೇಕು ಎಂದು ಒತ್ತಾಯಿಸಿದ ಅವರು, ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯು ಈಗಾಗಲೇ ಏಮ್ಸ್‍ಗಾಗಿ ಪ್ರತಿಭಟನೆಯನ್ನು ಆರಂಭಿಸಿದೆ. ಆ ಸಂಘಟನೆಯು ಸಹ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಒಂದು ಭಾಗವಾಗಿದೆ. ಹಾಗಾಗಿ ಕಲಬುರ್ಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ್, ವಿಜಯನಗರ, ಬಳ್ಳಾರಿ ಸೇರಿ ಏಳು ಜಿಲ್ಲೆಗಳಲ್ಲಿ ಸಂಘಟಿತ ಹೋರಾಟವನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಪ್ರಸ್ತುತ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದವರು ಒಗ್ಗಟ್ಟಿನ ಹೋರಾಟದ ಮೂಲಕ ಮಾಡು ಇಲ್ಲವ ಮಡಿ ಚಳುವಳಿಯನ್ನು ಆರಂಭಿಸುತ್ತೇವೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಡಾ. ಬಸವರಾಜ್ ಕಳಸ, ಡಾ. ಬಸವರಾಜ್ ಕುಮ್ನೂರು, ಪ್ರೊ. ಆರ್.ಕೆ. ಹುಡಗಿ, ಮನಿಷ್ ಜಾಜು, ಲಿಂಗರಾಜ್ ಸಿರಗಾಪೂರ್, ಡಾ. ಮಾಜಿದ್ ಡಾಗಿ ಮುಂತಾದವರು ಉಪಸ್ಥಿತರಿದ್ದರು.