ಅಂಗನವಾಡಿ ಕೇಂದ್ರಗಳಿಗೆ ಕೂಡಲೇ ಮೂಲಭೂತ ಸೌಕರ್ಯ ಕಲ್ಪಿಸಲು ಸೂಚನೆ
ಕಲಬುರಗಿ:ಜು.11:ಕಲಬುರಗಿ ಜಿಲ್ಲೆಯ ಹಲವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದಾಗ ಅಂಗನವಾಡಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೇ ಇರುವುದು ಕಂಡು ಬಂದಿದ್ದು, ಆದ್ದರಿಂದ ಕೂಡಲೇ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸಬೇಕೆಂದು ಕಲಬುರಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ ನವಲೆ ಅವರು ಹೇಳಿದರು.
ಅವರು ಗುರುವಾರ ಜಿಲ್ಲಾ ನ್ಯಾಯಾಲಯ ಆವರಣದ ಎ.ಡಿ.ಆರ್. ಕಟ್ಟಡದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಭಾಗವಹಿಸಿ ಮಾತನಾಡಿದ ಅವರು ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಎ. ಎನ್. ವೇಣುಗೋಪಾಲಗೌಡ, ನಿವೃತ ನ್ಯಾಯಮೂರ್ತಿಗಳು ಹಾಗೂ ಅಧ್ಯಕ್ಷರು, ಅಪೌಷ್ಠಿಕತೆ ನಿವಾರಣೆ ಸಲಹಾ ಸಮಿತಿಯ ಆದೇಶದ ಮೇರೆಗೆ ಕಲಬುರಗಿ ಜಿಲ್ಲೆಯ ಹಲವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಕೊಂದು ಕೊರತೆಗಳ ಬಗ್ಗೆ ಆಲಿಸಿ ಸ್ಥಿತಿಗತಿಗಳ ಬಗ್ಗೆ ತಿಳಿಸುವಂತೆ ಆದೇಶದ ಮೇರೆಗೆ ಭೇಟಿ ನೀಡಲಾಗಿ ಜಿಲ್ಲೆಯಲ್ಲಿ ಹೆಚ್ಚಿನ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿರುವುದರಿಂದ ಸರಿಯಾದ ಕಂಪೌಂಡ್ ಗೊಡೆ ಮತ್ತು ಗಾಳಿ ಬೆಳಕಿನ ವ್ಯವಸ್ಥೆ ಇರುವುದಿಲ್ಲ. ಅದೇ ರೀತಿ ಕೆಲವು ಅಂಗನವಾಡಿ ಕೇಂದ್ರಗಳಿಗೆ ವಿದ್ಯುಚ್ಚಕ್ತಿ ಸಂಪರ್ಕ ಇರುವುದಿಲ್ಲ ಮತ್ತು ವಿದ್ಯುಚ್ಚಕ್ತಿ ಸಂಪರ್ಕ ಇದ್ದಲ್ಲಿ ಅದನ್ನು ಕಡಿತಗೊಳಿಸಲಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಆಟವಾಡಲು ಮತ್ತು ಹೊರಗೆ ಆಟವಾಡಲು ಜಾಗದ ಅವಶ್ಯಕತೆ ಇರುತ್ತದೆ. ಆ ಪ್ರಕಾರ ಸೂಕ್ತ ಬಾಡಿಗೆ ಕೇಂದ್ರವನ್ನು ಆಯ್ದುಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ ಎಂದು ಹೇಳಿದ್ದರು.
ಇನ್ನು ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ಧಾನ್ಯ ಸಂಗ್ರಹಿಸಲು ಪರಿಕರಗಳು ಇರುವುದಿಲ್ಲ. ಬಂದ ಆಹಾರ ಧಾನ್ಯವನ್ನು ಚೀಲಗಳಲ್ಲಿ ಇಟ್ಟಿರುತ್ತಾರೆ. ಇವೆಲ್ಲ ನ್ಯೂನತೆಗಳ ಕುರಿತು ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಲಹಾ ಪೆಟ್ಟಿಗೆ ಇಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಸಂಬಂಧಪಟ್ಟ ಎಲ್ಲಾ ರೆಜಿಸ್ಟರ್‍ಗಳನ್ನು ಭರ್ತಿ ಮಾಡಿ ಇಟ್ಟಿಕೊಂಡಿರಬೇಕು. ಕೆಲವು ಅಂಗನವಾಡಿಗಳಲ್ಲಿ ಹಾಜರಾತಿ ಪುಸ್ತಕದಲ್ಲಿ ಹೆಚ್ಚಿನ ಮಕ್ಕಳ ಸಂಖ್ಯೆ ಇದ್ದು ಆದರೆ ಅಂಗನವಾಡಿಯಲ್ಲಿ ಕೆಲವು ಮಕ್ಕಳು ಮಾತ್ರ ಇರುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಹೊಸ ಅಂಗನವಾಡಿಗಳಿಗೆ ಪರವಾನಗಿ ನೀಡಿದ್ದು ಅಲ್ಲಿಯು ಸಹ ಮೂಲಭೂತ ಸೌಕರ್ಯ ಒದಗಿಸಬೇಕಾದ ಅವಶ್ಯಕತೆ ಇದೆ ಎಂದರು.
ಒಟ್ಟರೆಯಾಗಿ ಅಂಗನವಾಡಿಗಳ ಗುಣಮಟ್ಟ ಭಧ್ಧತೆ ಹೆಚ್ಚಿಸಲು ಮೂಲಭೂತ ಸೌಕರ್ಯ ವ್ಯವಸ್ಥೆ ಕೂಡಲೆ ಕಲ್ಪಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್‍ಗೆ ಸೂಚಿಸಲಾಗಿದೆ ಎಂದರು.