30ಕ್ಕೆ ಕಲಬುರಗಿ ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಚುನಾವಣೆ
ಕಲಬುರಗಿ,ಜು.11-ಕಲಬುರಗಿ ಮಹಾನಗರ ಪಾಲಿಕೆಯ 22ನೇ ಅವಧಿಯ ಮೇಯರ್, ಉಪ-ಮೇಯರ್ ಸ್ಥಾನಕ್ಕೆ ಜು.30 ಮಧ್ಯಾಹ್ನ 12.30ಕ್ಕೆ ಚುನಾವಣೆ ನಡೆಯಲಿದೆ.
ಮೇಯರ್ ಸ್ಥಾನ “ಪರಿಶಿಷ್ಟ ಪಂಗಡ” ಹಾಗೂ ಉಪ-ಮೇಯರ್ ಸ್ಥಾನ “ಬಿಸಿಎ”ಗೆ ಮೀಸಲಿರಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಮಹಾನಗರ ಪಾಲಿಕೆಯ ಇಂದಿರಾ ಸ್ಮಾರಕ ಭವನ (ಟೌನ್ ಹಾಲ್)ದಲ್ಲಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಮೇಯರ್, ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ನಡೆಯಲಿದೆ.
ಅಂದು ಬೆಳಿಗ್ಗೆ 10.30 ಗಂಟೆಯೊಳಗಾಗಿ ನಾಮಪತ್ರ ಸಲ್ಲಿಕೆ, ಸದಸ್ಯರ ಹಾಜರಾತಿ ಪಡೆದ ನಂತರ 12.30 ರಿಂದ ಚುನಾವಣೆ ಪ್ರಕ್ರಿಯೆ ನಡೆಯಲಿದೆ.
ಯಲ್ಲಪ್ಪ ನಾಯ್ಕೋಡಿ ಆಯ್ಕೆ ಸಾಧ್ಯತೆ
55 ಸದಸ್ಯರ ಸಂಖ್ಯಾ ಬಲ ಹೊಂದಿರುವ ಮಹಾನಗರ ಪಾಲಿಕೆಯಲ್ಲಿ ವಾರ್ಡ್ ನಂಬರ್-6ರಿಂದ ಆಯ್ಕೆಯಾದ ಕಾಂಗ್ರೆಸ್ ಸದಸ್ಯ ಯಲ್ಲಪ್ಪ ನಾಯ್ಕೋಡಿ ಅವರು, ಪರಿಶಿಷ್ಟ ಪಂಗಡದಿಂದ ಆಯ್ಕೆಯಾದ ಏಕೈಕ ಸದಸ್ಯರಾಗಿದ್ದು, ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವುದರಿಂದ ಅವರೇ ಮೇಯರ್ ಆಯ್ಕೆಯಾಗುವ ಸಾಧ್ಯತೆಗಳಿವೆ.