ಡೆಂಗ್ಯು ಜ್ವರ ತಡೆಗೆ ಫಾಗಿಂಗ್ ಮಾಡಲು ಕನ್ನಡ ಭೂಮಿ ಜಾಗೃತಿ ಸಮಿತಿ ಆಗ್ರಹ
ಕಲಬುರಗಿ: ಜು.11:ಕಲಬುರಗಿ ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಹಾಮಾರಿ ಡೆಂಗ್ಯು ತಡೆಗಟ್ಟಲು ನಗರದಾದ್ಯಂತ ಫಾಗಿಂಗ್ (ಧೂಮೀಕರಣ) ಮಾಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿಯ ನಗರ ಅಧ್ಯಕ್ಷ ಪರಮೇಶ್ವರ ಹಡಪದ ಮಹಾನಗರ ಪಾಲಿಕೆಗೆ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಳೆಗಾಲ ಆರಂಭವಾಗಿ ತಿಂಗಳಾಗುತ್ತಾ ಬಂದರೂ ಮಹಾನಗರ ಪಾಲಿಕೆ ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ.ಇದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿ ಡೆಂಗ್ಯು ಜ್ವರ ಉಲ್ಬಣಿಸಿರುವುದರಿಂದ ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ.ಸಾಯುವ ಸಂಖ್ಯೆ ಹೆಚ್ಚುತ್ತಿದೆ.ಆದರೂ ಮಹಾನರ ಪಾಲಿಕೆ, ಆರೋಗ್ಯ ಇಲಾಖೆ ಜನರ ಆರೋಗ್ಯ ಕಾಪಾಡಲು ಮುಂದೆ ಬರುತ್ತಿಲ್ಲ ಕೆಲವು ಬಡಾವಣೆಗಳಲ್ಲಿ ಕಾಟಾಚಾರಕ್ಕೆ ಎಂಬಂತೆ ಫಾಗಿಂಗ್ ಮಾಡಲಾಗಿದೆ.ಹಲವು ಕಡೆ ಮಳೆ ನೀರು ಶೇಖರಣೆಯಾಗಿ ಸೊಳ್ಳೆಗಳು ಹೆಚ್ಚಾಗಿವೆ.ಸ್ವಚ್ಚತೆ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.
ನಗರದ ಸ್ಲಂ ಬಡಾವಣೆಯಲ್ಲಿ ದಿನನಿತ್ಯ ಫಾಗಿಂಗ್ ಮಾಡಬೇಕು.ತೆಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.ಸೊಳ್ಳೆಯಿಂದ ಡೆಂಗ್ಯು ಜೊತೆಗೆ ಚಿಕನ್ ಗುನ್ಯಾ ಜ್ವರವನ್ನು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ.ಸೊಳ್ಳೆಗಳ ನಿಯಂತ್ರಣಕ್ಕೆ ಕೂಡಲೇ ದಿನನಿತ್ಯ ನಗರದಾದ್ಯಂತ ಫಾಗಿಂಗ್ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.