ಯುವ ಪೀಳಿಗೆಯಲ್ಲಿ ದೇಶಪ್ರೇಮ ಹೆಚ್ಚಿಸಲು ವಿಶೇಷ ಕಾರ್ಯಕ್ರಮ
ಧಾರವಾಡ,ಜು.11: ಯುವ ಪೀಳಿಗೆ ಮತ್ತು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ದೇಶಭಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಅಖಂಡ ಧಾರವಾಡ ಜಿಲ್ಲೆ ಹಾಗೂ ಸುತ್ತಲಿನ ಸ್ವಾತಂತ್ರ್ಯ ಹೋರಾಟಗಾರರ ಕುರಿತು ವಿಶೇಷ ನೃತ್ಯ ರೂಪಕಗಳನ್ನು ಬರುವ ಅಗಸ್ಟ್ 15 ರಂದು ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ನೂತನ ಸಭಾಂಗಣದಲ್ಲಿ ಜರುಗಿದ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ-ಕಾಲೇಜುಗಳ ಪ್ರಾಂಶುಪಾಲರ, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಹಾಗೂ ಬಿಇಓಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನ ಅಗಸ್ಟ್ 15 ಸ್ವಾತಂತ್ರ್ಯೋತ್ಸವವನ್ನು ವಿನೂತನವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಯುವ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಅರಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಐದಾರು ಸ್ವತಂತ್ರ ಹೋರಾಟಗಳ ಸನ್ನಿವೇಶ ಕುರಿತಾದ ನೃತ್ಯ ಹಾಗೂ ದೃಶ್ಯ ರೂಪಕಗಳನ್ನು ಆಯೋಜಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸ್ಥಳೀಯ ಸ್ವತಂತ್ರ ಹೋರಾಟಗಾರರ ಕುರಿತು ಜಾಗೃತಿ ಮೂಡಿಸುವ ಘಟನೆಗಳು, ವ್ಯಕ್ತಿ ಹೋರಾಟ ಕುರಿತು ನೃತ್ಯ ಅಥವಾ ದೃಶ್ಯ ರೂಪಕಗಳನ್ನು ತಾಲೂಕಾವಾರು ಹಮ್ಮಿಕೊಂಡು, ಆಯ್ಕೆಯಾದ ತಂಡಗಳಿಂದ ಜಿಲ್ಲಾ ಕೇಂದ್ರಗಳಲ್ಲಿ ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ವಿಜೇತರಿಗೆ ಉಸ್ತುವಾರಿ ಸಚಿವರಿಂದ ಬಹುಮಾನ ವಿತರಿಸಲಾಗುವುದೆಂದರು. ಈ ನಿಟ್ಟಿನಲ್ಲಿ ತಾಲೂಕಾ ಮಟ್ಟದ ಬಿಇಓಗಳು ಕಾರ್ಯಪ್ರರ್ವತ್ತರಾಗುವಂತೆ ತಿಳಿಸಿದರು.
ಬಾಲಬಳಗ ಶಾಲೆಯ ಅಧ್ಯಕ್ಷರಾದ ಡಾ. ಸಂಜೀವ ಕುಲಕರ್ಣಿ ಮಾತನಾಡಿ ಸ್ವಾತಂತ್ರ ಹೋರಾಟದಲ್ಲಿ ಚರಕವು ಅಸ್ತ್ರವಾಗಿದ್ದು ಅಹಿಂಸೆಯ ಸಂಕೇತವಾಗಿತ್ತು. ಈ ಹಿನ್ನೆಲೆಯಲ್ಲಿ ಬಾಲಬಳಗದ ವಿದ್ಯಾರ್ಥಿಗಳಿಂದ ಚರಕ ನೂಲುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುವುದೆಂದು ತಿಳಿಸಿದರು.
ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಮಾತನಾಡಿ ಧಾರವಾಡ ಜಿಲ್ಲೆಯಲ್ಲಿ ಅನೇಕ ಜಾನಪದ ಹಾಗೂ ರಂಗಕಲಾವಿದರುಗಳಿದ್ದು ಚಿಕ್ಕ ಚಿಕ್ಕ ಬರಹಗಳನ್ನು ಬಳಸಿ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ರೂಪಕ ಹಮ್ಮಿಕೊಳ್ಳಬಹುದಾಗಿದೆಯೆಂದರು.
ಹಿರಿಯ ಕಲಾವಿದರಾದ ಡಾ. ವಿಶ್ವೇಶ್ವರಿ ಹಿರೇಮಠ ಮಾತನಾಡಿ ದೇಶಭಕ್ತಿ ಗೀತೆಗಳನ್ನು ಬಳಸಿ ವೈವಿದ್ಯಮಯ ವೇಷಭೂಷಣಗಳ ನೃತ್ಯ ರೂಪಕಗಳನ್ನು ಜಿಲ್ಲೆಯಾದ್ಯಂತ ಆಯೋಜಿಸಬಹುದಾಗಿದೆಯೆಂದು ಅಭಿಪ್ರಾಯಪಟ್ಟರು.
ರಂಗಾಯಣ ಕಲಾವಿದ ನದಾಫ್ ಅವರು ನೂರಾರು ವಿದ್ಯಾರ್ಥಿಗಳ 20 ನಿಮಿಷಗಳ ಸ್ವಾತಂತ್ರ್ಯ ಹೋರಾಟದ ನೃತ್ಯ ರೂಪಕ ಏರ್ಪಡಿಸಬಹುದೆಂದು ತಿಳಿಸಿದರು.
ಡಿಡಿಪಿಐ ಎಸ್.ಎಸ್.ಕೆಳದಿಮಠ ಮಾತನಾಡಿ ನರಗುಂದ ಬಂಡಾಯ, ಅದರಗುಂಚಿ ಶಂಕರ ಗೌಡ್ರ, ಅಂದಾನಪ್ಪ ದೊಡ್ಡಮೋಟ, ಮೈಲಾರ ಮಹಾದೇವ, ಮುಂಡರಗಿ ಭೀಮರಾಯ ಸೇರಿದಂತೆ ಹಲವರು ಹೋರಾಟದ ಚಳುವಳಿ ಆಧಾರಿತ ರೂಪಕಗಳನ್ನು ಹಮ್ಮಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಧಾರವಾಡದ ಶಾಲಾ-ಕಾಲೇಜು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕಲಾವಿದರ ಸಭೆಯನ್ನು ಜುಲೈ 12 ರಂದು ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಲಾಗುವುದೆಂದು ತಿಳಿಸಿದರು.
ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಪದವಿ ಪೂರ್ವ ಕಾಲೇಜಗಳ ಉಪನಿರ್ದೇಶಕ ಸುರೇಶ ವೇದಿಕೆಯಲ್ಲಿದ್ದರು. ವಿವಿಧ ಕಲಾವಿದರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಎಲ್ಲ ತಾಲೂಕುಗಳ ಬಿಇಓಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.