ಡೆಂಘೀ ನಿಯಂತ್ರಣದ ಅರಿವು ಮೂಡಿಸಿ
ಲಕ್ಷ್ಮೇಶ್ವರ: ಡೆಂಘೀ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಡೆಂಘೀ ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದು ಗದಗ ಜಿಪಂ ಯೋಜನಾ ನಿರ್ದೇಶಕರು ಮತ್ತು ತಾಪಂ ಆಡಳಿತಾಧಿಕಾರಿ ಎಂ.ವಿ. ಚಳಗೇರಿ ನಿರ್ದೇಶನ ನೀಡಿದರು.
ಲಕ್ಷ್ಮೇಶ್ವರ ತಾಲೂಕು ಪಂಚಾಯತಿಯ ಸಭಾಂಗಣದಲ್ಲಿ ಹಮ್ಮಿಕೊಂಡ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಹಾಗೂ ಡೆಂಘೀ ನಿಯಂತ್ರಣ ಕುರಿತಂತೆ ಕರೆಯಲಾಗಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಡೆಂಘೀ ಮಹಾಮಾರಿ ತುಂಬಿ ತುಳುಕುತ್ತಿದ್ದು, ಸೋಂಕು ನಿವಾರಣೆಗಾಗಿ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯತಿ, ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು. ಲಕ್ಷ್ಮೇಶ್ವರ ಪಟ್ಟಣ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಮನೆ ಬಾಗಿಲಿಗೆ ತೆರಳಿ ಸಮೀಕ್ಷೆ ಕೈಗೊಳ್ಳಬೇಕು. ನೀರು ಅಲ್ಲಲ್ಲಿ ಸಂಗ್ರಹಗೊಳ್ಳದಂತೆ ಜಾಗೃತಿ ಮೂಡಿಸಬೇಕು. ಎಲ್ಲಿಯಾದರೂ ಮನೆಗಳಲ್ಲಿ ನೀರು ಸಂಗ್ರಹಗೊಂಡಿರುವುದು ಗಮನಕ್ಕೆ ಬಂದರೆ ತಕ್ಷಣ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಗ್ರಾಮೀಣ ಭಾಗಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಎಚ್ಚರಿಕೆ ನೀಡಬೇಕು. ಸರಕಾರಿ ಮತ್ತು ಖಾಸಗಿ ಪ್ರದೇಶಗಳಲ್ಲಿ ನೀರು ನಿಂತಿರುವ ಕಡೆಗಳಲ್ಲಿ ಸೊಳ್ಳೆ ನಿಯಂತ್ರಣ ದ್ರಾವಣ ಸಿಂಪರಣೆ ಮಾಡಬೇಕೆಂದು ಸೂಚನೆ ನೀಡಿದರು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಎಸ್. ಹಿರೇಮಠ ಅವರು ಮಾತನಾಡಿ,
ಡೆಂಘೀ ಜ್ವರ ವೈರಸ್‍ನಿಂದ ಬರುವ ಸಾಂಕ್ರಾಮಿಕ ರೋಗವಾಗಿದ್ದು, ಇದು ಸೋಂಕಿತ ಈಡೀಸ್ ಜಾತಿಯ ಸೊಳ್ಳೆಯ ಕಡಿತದಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನಿಂತ ನೀರಿನಲ್ಲಿ ಹಾಗೂ ನೀರು ಶೇಖರಣೆ ಸಲಕರಣೆಗಳಲ್ಲಿ ಮೊಟ್ಟೆ ಇಟ್ಟು ಸಂತನಾಭಿವೃದ್ಧಿ ಮಾಡುತ್ತವೆ. ಈ ಸೊಳ್ಳೆಯ ಬಹುತೇಕ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಹಾಗಾಗಿ ಡೆಂಘಿ ಜ್ವರ ಹತೋಟಿ ಪ್ರತಿಯೊಬ್ಬರ ಕೈಯಲ್ಲಿದೆ. ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ನಿಟ್ಟಿ ಅಗತ್ಯ ಜಾಗೃತಿ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡು ಡೆಂಘೀ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ ಕರ್ಜಗಿ ಮಾತನಾಡಿ, ಒಂದು ಸೋಂಕಿತ ಸೊಳ್ಳೆಯು ಮನುಷ್ಯನನ್ನು ಕಚ್ಚಿದ 8ರಿಂದ 14 ದಿನಗಳ ನಂತರ ಡೆಂಘೀ ಜ್ವರದ ಲಕ್ಷಣಗಳು ಕಂಡು ಬರುತ್ತವೆ. ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಚರ್ಮದ ಮೇಲೆ ಗುಳ್ಳೆಗಳು, ಮಾಂಸ ಖಂಡಗಳಲ್ಲಿ ನೋವು ಕಾಣಿಸಿಕೊಳ್ಳುವುದು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ. ಡೆಂಘೀ ಜ್ವರಕ್ಕೆ ಯಾವುದೇ ನಿರ್ಧಿಷ್ಟ ಚಿಕಿತ್ಸೆ ಅಥವಾ ಲಸಿಕೆಯಾಗಲಿ ಇಲ್ಲ. ಈ ರೋಗದ ಲಕ್ಷಣಗಳಿಗನುಸಾರವಾಗಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬಹುದು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ನಿಂತ ನೀರು ಸೊಳ್ಳೆಯ ತವರು, ಆದ್ದರಿಂದ ಎಲ್ಲ ಬಗೆಯ ನೀರಿನ ತೊಟ್ಟಿ ಡ್ರಮ್, ಬ್ಯಾರಲ್, ವಾರಕೊಮ್ಮೆ ಖಾಲಿ ಮಾಡಿ ಮತ್ತು ಸ್ವಚ್ಛಗೊಳಿಸಿ ಒಣಗಿಸಿ ಪುನಃ ನೀರು ತುಂಬಿ ಸೊಳ್ಳೆಗಳು ನುಸುಳದಂತೆ ಮುಚ್ಚಳಿಕೆಯಿಂದ ಭದ್ರವಾಗಿ ಮುಚ್ಚಬೇಕು. ಮನೆಯ ಒಳಗೆ ಮತ್ತು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಸೊಳ್ಳೆ ಉತ್ಪತ್ತಿಯನ್ನು ತಡೆಗಟ್ಟಬೇಕು. ಮನೆಯ ಸುತ್ತ ಬಯಲಿನಲ್ಲಿ ಮತ್ತು ಮಾಳಿಗೆ ಮೇಲೆ ಟೈರ್ ಟ್ಯೂಬ್, ಹೂವಿನ ಕುಂಡ, ಒಡೆದ ಬಾಟಲಿ ಮುಂತಾದವುಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಈಡೀಸ್ ಸೊಳ್ಳೆಯು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಈ ಸಮಯದಲ್ಲಿ ಆದಷ್ಟು ಮೈತುಂಬಾ ಬಟ್ಟೆಯನ್ನು ಧರಿಸಬೇಕು. ಮನೆಯ ಒಳಗೆ ಸೊಳ್ಳೆ ಬರದಂತೆ ಕಿಟಕಿ, ಬಾಗಿಲುಗಳಿಗೆ ಜಾಲರಿ ಅಳವಡಿಸುವುದು ಹಾಗೂ ಸೊಳ್ಳೆ ನಿರೋಧಕ ಬಳಸಬೇಕು. ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ಸಾರ್ವಜನಿಕರು ಈ ಕ್ರಮಗಳನ್ನು ಅನುಸರಿಸುವಂತೆ ಜಾಗೃತಿ ಮೂಡಿಸಬೇಕು ಎಂದರು.
ಇಲಾಖಾವಾರು ಮಾಸಿಕ ಪ್ರಗತಿ ಪರಿಶೀಲನೆ ಮಾಡಲಾಯಿತು. ತಾಲೂಕು ಪಂಚಾಯತಿ ವಾರ್ಷಿಕ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆಯಲಾಯಿತು. ಲಿಂಕ್ ಡಾಕ್ಯುಮೆಂಟ್‍ಗೆ ಅನುಮೋದನೆ, ಅನಿರ್ಬಂಧಿತ ಅನುದಾನ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲಾಯಿತು.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ತಾಪಂ ಸಿಬ್ಬಂದಿಯಾದ ಬಿ.ಬಿ. ತಳವಾರ, ಮಾರುತಿ ಕೊಡ್ಲಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಇತರರು ಇದ್ದರು.