ಚೆಕ್ ವಿತರಣೆ
ಬ್ಯಾಡಗಿ,ಜು.11: ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ನೆಮ್ಮದಿಯ ಶ್ರದ್ದಾ ಕೇಂದ್ರಗಳಾಗಿವೆ. ಅದಕ್ಕಾಗಿ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಾನದಿಂದ ಶ್ರೀಗುಬ್ಬಿ ನಂಜುಂಡೇಶ್ವರ ದೇವಸ್ಥಾನಕ್ಕೆ ಹಣ ನೀಡಿರುವುದು ನಮ್ಮ ಸಂಸ್ಕೃತಿಯ ಪ್ರತೀಕ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಯೋಜನಾಧಿಕಾರಿ ರಘುಪತಿ ಭಟ್ ತಿಳಿಸಿದರು.
ತಾಲೂಕಿನ ಹಿರೇಹಳ್ಳಿ ಗ್ರಾಮದ ಶ್ರೀ ಗುಬ್ಬಿ ನಂಜುಂಡೇಶ್ವರ ದೇವಸ್ಥಾನದ ಗೋಪುರ ನಿರ್ಮಾಣಕ್ಕೆ 1.50 ಲಕ್ಷ ರೂಗಳ ಚೆಕ್ ವಿತರಿಸಿ ಮಾತನಾಡಿದ ಅವರು, ಶ್ರೀಕ್ಷೇತ್ರದ ವತಿಯಿಂದ ಈಗಾಗಲೇ ಹಲವಾರು ದೇವಾಲಯಗಳ ಜೀರ್ಣೋದ್ಧಾರ ಹಾಗೂ ನೂತನ ದೇವಾಲಯ ನಿರ್ಮಾಣಕ್ಕೆ ಧನ ಸಹಾಯ ಮಾಡಲಾಗುತ್ತಿದೆ. ಇದರ ಕಾರ್ಯ ವ್ಯಾಪ್ತಿ ದೇವಾಲಯಗಳಿಗಷ್ಟೆ ಸೀಮಿತವಾಗದೆ ರೈತರಿಗೆ, ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೆರವಾಗುವಂತ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಪಂ ಅಧ್ಯಕ್ಷ ಶಿವನಗೌಡ ಪಾಟೀಲ ಮಾತನಾಡಿ, ಪುಣ್ಯ ಕಾರ್ಯಗಳಲ್ಲಿ ಧರ್ಮಸ್ಥಳದ ಕಾರ್ಯ ಶ್ಳಾಘನೀಯ. ಈ ಭಾಗದಲ್ಲಿ ಸ್ತ್ರೀ ಶಕ್ತಿ ಗುಂಪುಗಳನ್ನು ಮಾಡಿ ಸ್ತ್ರೀಯರಿಗೆ ಸ್ವಾವಲಂಬಲನೆಗಾಗಿ ಹಣಕಾಸಿನ ಸಹಾಯ ನೀಡುತ್ತಿರುವುದು ಹೆಮ್ಮೆಯ ವಿಷಯ. ಅನೇಕ ಮಹಿಳೆಯರು ಈ ಯೋಜನೆ ಲಾಭ ಪಡೆದಿದ್ದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಪ್ರತಿಯೊಬ್ಬರೂ ಶ್ರೀಕ್ಷೇತ್ರಕ್ಕೆ ಚಿರಋಣಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಸಿ.ಪಾಟೀಲ, ಕೆ.ಸಿ.ಮಠದ, ಬಿ.ಎಂ.ಗೌರಾಪುರ, ಬಿ.ಎನ್.ಬನ್ನಿಹಳ್ಳಿ, ವೀರನಗೌಡ ಬಸನಗೌಡ, ಗಣೇಶಪ್ಪ ಚಿಕ್ಕಳ್ಳಿ, ಮಲ್ಲೇಶಪ್ಪ ಹುಲ್ಲಾಳ, ಗಣೇಶ ಬಣಕಾರ, ಗುಡ್ಡಪ್ಪ ಬನ್ನಿಹಳ್ಳಿ, ಮಲ್ಲನಗೌಡ ಘಂಟೆಗೌಡ್ರ, ಮಲ್ಲೇಶಪ್ಪ ದಿಡಗೂರು, ಬಸವಂತಪ್ಪ ಬಣಕಾರ, ಮಂಜಣ್ಣ ತೋಟದ, ವಿರೂಪಾಕ್ಷ ಅಂಗಡಿ, ಭಾವ ಲಿಂಗಾಯ, ಬಸವರಾಜ ಲಕ್ಕಮ್ಮನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿಶ್ರಾಂತ ಶಿಕ್ಷಕರಾದ ನಾಗೇಂದ್ರಪ್ಪ ಹರಿಜನ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು. ವೀರನಗೌಡ ಪಾಟೀಲ ವಂದಿಸಿದರು.