ಡೆಂಗ್ಯೂ ತಡೆಗೆ ಕ್ರಮಕ್ಕೆ ಸೂಚನೆ
ಬ್ಯಾಡಗಿ,ಜು.11: ತಾಲೂಕಿನಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ. ಪುರಸಭೆ ಮುಖ್ಯಾಧಿಕಾರಿ ಹಾಗೂ ಪಿಡಿಓಗಳು ಮತ್ತು ಆರೋಗ್ಯ ಇಲಾಖೆಯವರು ಜಂಟಿಯಾಗಿ ಕೂಡಿಕೊಂಡು ವಾರ್ಡ್ ಹಾಗೂ ಗ್ರಾಮಗಳಿಗೆ ನಿತ್ಯವೂ ಭೇಟಿ ನೀಡಿ ಸಮರ್ಪಕ ನಿರ್ವಹಣೆಗೆ ನಿಗಾ ವಹಿಸಬೇಕಲ್ಲದೇ ಡೆಂಗ್ಯೂ ಕಾಯಿಲೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಸವರಾಜ ಶಿವಣ್ಣನವರ
ತಾಖೀತು ಮಾಡಿದರು.
ಪಟ್ಟಣದ ತಾಲೂಕಾ ಪಂಚಾಯತ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸೊಳ್ಳೆ ಕಾಟ ಜಾಸ್ತಿಯಾಗಿದೆ. ಪ್ರತಿ ಊರುಗಳಲ್ಲಿ ಧೂಮೀಕರಣ (ಫಾಗಿಂಗ್) ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಆಹಾರ ಇಲಾಖೆಯ ಪರಿಶೀಲನೆ ಸಂದರ್ಭದಲ್ಲಿ ಮಾತನಾಡಿದ ಶಾಸಕರು ತಾಲೂಕಿನ ಛತ್ರ ಗ್ರಾಮದ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡಿನ ಫಲಾನುಭವಿಗಳು ದೂರದ ಅಳಲಗೇರಿ ಗ್ರಾಮಕ್ಕೆ ಹೋಗಿ ಪಡಿತರ ತರಬೇಕಿದೆ. ಛತ್ರ ಗ್ರಾಮದಲ್ಲಿ ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ದುಡಿಮೆ ಬಿಟ್ಟು ಪರಸ್ಥಳಕ್ಕೆ ಹೋಗಿ ಪಡಿತರ ತರಲು ಹರಸಾಹಸ ಪಡುತ್ತಿದ್ದಾರೆ. ಆ ಗ್ರಾಮಸ್ಥರ ಅನೂಕೂಲಕ್ಕೆ ಛತ್ರ ಗ್ರಾಮದಲ್ಲಿ ಹೊಸ ಪಡಿತರ ಅಂಗಡಿ ತೆರೆಯುವಂತೆ ಆಹಾರ ಇಲಾಖೆಯ ಅಧಿಕಾರಿಗೆ ತಿಳಿಸಿದರು.
ಸಮಾಜ ಕಲ್ಯಾಣಾಧಿಕಾರಿ ದೊಡ್ಡಬಸವರಾಜ ಸಭೆಗೆ ಮಾಹಿತಿ ನೀಡಿ ಮಾತನಾಡುತ್ತ, ಕಳೆದ ಸಾಲಿನಲ್ಲಿ ಶೇ.98 ರಷ್ಟು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿಯಲ್ಲಿ ಉತ್ತಿರ್ಣಗೊಂಡಿದ್ದಾರೆಂದು ತಿಳಿಸಿದಾಗ ಶಾಸಕರು ಮಾತನಾಡಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೋಚಿಂಗ್ ವ್ಯವಸ್ಥೆ ಮಾಡಿ ಮುಂದಿನ ಬಾರಿ ನೂರಕ್ಕೆ ನೂರು ವಿದ್ಯಾರ್ಥಿಗಳು ತೆರ್ಗಡೆಯಾಗುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.
ಕೊನೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಬಸವರಾಜ ಶಿವಣ್ಣನವರ ಅವರು, ಕ್ಷೇತ್ರದ ಅಧಿಕಾರಿಗಳು ಜನರನ್ನು ಅಲೆದಾಡಿಸದೇ ಜನರ ಸಮಸ್ಯೆಗಳಿಗೆ ಸ್ಪಂದಿಸಿ ತ್ವರಿತವಾಗಿ ಕೆಲಸಗಳನ್ನು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ತಾಲೂಕಿನ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸಬೇಕು ಹಾಗೂ ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ಪರಿಹರಿಸುವಲ್ಲಿ ಅಧಿಕಾರಿಗಳು ತಪ್ಪು ಮಾಡಬಾರದು ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಸಭೆಯಲ್ಲಿ ತಹಶೀಲ್ದಾರ ಎಫ್.ಎ.ಸೋಮನಕಟ್ಟಿ, ಹಾವೇರಿ ತಹಶೀಲ್ದಾರ ಅಮೃತಗೌಡ ಪಾಟೀಲ, ರಾಣೆಬೆನ್ನೂರು ಇಓ ಸುಮಲತಾ, ಹಾವೇರಿ ಇಓ ಭರತ ಹೆಗಡೆ, ತಾಲೂಕಾ ಅಕ್ಷರ ದಾಸೋಹ ಆಧಿಕಾರಿ ಎನ್.ತಿಮ್ಮಾರಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಮರಡೆಪ್ಪ ಹೆಡಿಯಾಲ, ಶಾಸಕರ ಆಪ್ತ ಸಹಾಯಕ ಪೀರಸಾಬ ನಧಾಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.