ಕಾಂಗ್ರೆಸ್ ಸರ್ಕಾರದ  ಖಜಾನೆ ಖಾಲಿಯಾಗಿಲ್ಲ, ಬಿಜೆಪಿಗರ ತಲೆ ಮೆದುಳು ಖಾಲಿಯಾಗಿದೆ -ಸಚಿವ ರೆಡ್ಡಿ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು.11 :- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ನೀಡುವಲ್ಲಿ ಖಜಾನೆ ಖಾಲಿ ಮಾಡಿಕೊಂಡು ದಿವಾಳಿಯಾಗಿದೆ ಎಂದು ಪ್ರತಿಪಕ್ಷ ಬಿಜೆಪಿಗರು ಹೇಳುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ನಿಲ್ಲುವುದಿಲ್ಲ ಸರ್ಕಾರದ ಖಜಾನೆ ಸಹ ಖಾಲಿಯಾಗಿಲ್ಲ ಆದರೆ ಬಿಜೆಪಿಗರ ಮೆದುಳು ಖಾಲಿಯಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದರು.
ಅವರು ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ರಾಜ್ಯ ಕಾಂಗ್ರೆಸ್ ಸರಕಾರ ಜನರಿಗೆ ನೀಡಿದ ಭರವಸೆ ಈಡೇರಿಸುವುದರೊಂದಿಗೆ ಉತ್ತಮ ಆಡಳಿತ ನಡೆಸುತ್ತಿದ್ದು, ಸುಳ್ಳಿನ ಪಿತಾಮಹರಂತಿರುವ ಬಿಜೆಪಿಗರು  ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ತಿಳಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸಿನ ವ್ಯವಹಾರದ ತನಿಖೆ ನಡೆಯುತ್ತಿದ್ದು, ತನಿಖೆಯ ನಂತರ ಸತ್ಯ ತಿಳಿಯಲಿದೆ. ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಮುಡಾದಿಂದ ನಿವೇಶನ ಹಂಚಿಕೆಯಾಗಿದೆ. ಅಲ್ಲದೆ, 40 ಪರ್ಸೆಂಟ್ ಕಮೀಷನ್ ದಂಧೆಯೂ ಬಿಜೆಪಿ ಅಧಿಕಾರವಧಿಯಲ್ಲೇ ನಡೆದಿದೆ. ಹೀಗಿದ್ದರೂ, ರಾಜ್ಯ ಸರಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಇ.ಡಿ ತನಿಖೆಯಾಗಲಿದ್ದು, ಆ ಬಗ್ಗೆ ಏನೂ ಹೇಳಲಾರೆ ಎಂದರಲ್ಲದೆ, ಸರಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ ಎಂದು ಬಸವರಾಜ ರಾಯರೆಡ್ಡಿ ಎಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಇದೇ  ಸಂದರ್ಭದಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಕ್ಷೇತ್ರದಲ್ಲಿರುವ ದೇವಾಲಯಗಳ ಜೀರ್ಣೋದ್ಧಾರಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂದು ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸಿದ್ದನಗೌಡ, ಮುಖಂಡರಾದ ಕೆ.ಎಂ.ಶಶಿಧರ, ಕಾವಲಿ ಶಿವಪ್ಪನಾಯಕ ಟಿ ಜಿ ಮಲ್ಲಿಕಾರ್ಜುನ, ಜಯರಾಂ ಸೇರಿ ಇತರರಿದ್ದರು. ಮೊದಲ ಬಾರಿಗೆ ಕೂಡ್ಲಿಗಿ ಕ್ಷೇತ್ರಕ್ಕೆ ಆಗಮಿಸಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರನ್ನು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಸನ್ಮಾನಿಸಿ ರಾಜಕೀಯದ ನಡೆನುಡಿಗಳ ಬಗ್ಗೆ ತಿಳಿ ಹೇಳಿ ಮುನ್ನೆಡೆಸುವ ರಾಜಕೀಯ ಗುರುಗಳು ಎಂದು ಶಾಸಕರು ನೆನಪಿಸಿಕೊಂಡರು.