ಕೂಡ್ಲಿಗಿ ಶಾಸಕರ ಆಶಯದಂತೆ ಹೈಟೆಕ್ ಬಸ್ ನಿಲ್ದಾಣಕ್ಕೆ ಕ್ರಮ:ರಾಮಲಿಂಗಾರೆಡ್ಡಿ
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು.11 :-  ಕೂಡ್ಲಿಗಿ ಘಟಕವು ತುಂಬಾ ಹಳೆಯ ಘಟಕವಾಗಿದ್ದು ಹಾಗೂ ಬಸ್ ನಿಲ್ದಾಣ ಸಹ ಹಳೆದಿರುವುದರಿಂದ ಹೈಟೆಕ್ ಬಸ್ ನಿಲ್ದಾಣಕ್ಕೆ ಕೂಡ್ಲಿಗಿ ಶಾಸಕರ ಕೋರಿಕೆಯಂತೆ  ಡಿಪೋವನ್ನು ಶಾಸಕರು ಗುರುತಿಸುವ ಜಾಗದಲ್ಲಿ ನಿರ್ಮಾಣ ಮಾಡಲು ಮುಂದಾಗಿ ನಿಲ್ದಾಣವನ್ನು ಈಗಿರುವ ಸ್ಥಳದಲ್ಲೇ ಹೈಟೆಕ್ ನಿಲ್ದಾಣವಾಗಿ ನಿರ್ಮಾಣಮಾಡಲು ಆದ್ಯತೆ ಮೇರೆಗೆ ಗಮನಹರಿಸುವೆ ಎಂದು ರಾಜ್ಯದ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಪಟ್ಟಣದ ಕೆಕೆಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನೂತನ  ಬಸ್‌ಗಳಿಗೆ ಬುಧವಾರ ಚಾಲನೆ ನೀಡಿ ಮಾತನಾಡುತ್ತಾ ಅವರು . ತೀರಾ ಹಳೆಯದಾದ ಬಸ್ ನಿಲ್ದಾಣದ ಸ್ಥಿತಿಗತಿಯನ್ನು ಶಾಸಕರು ತಮ್ಮ ಗಮನಕ್ಕೆ ತಂದಿದ್ದಾರೆ. ಅಲ್ಲದೆ, ಈಗಿರುವ ಹಳೆಯ ಬಸ್‌ಗಳ ಬದಲಾಗಿ ಮತ್ತೊಷ್ಟು ಹೊಸ ಬಸ್‌ಗಳನ್ನು ನೀಡುವಂತೆ ಬೇಡಿಕೆ ಸಲ್ಲಿಸಲಾಗಿದೆ. ಇದಲ್ಲದೆ, ಪಟ್ಟಣದ ಹೊರವಲಯದಲ್ಲಿ ಸರಕಾರದ ಜಾಗ ಗುರುತಿಸಿದ್ದು, ಆ ಸ್ಥಳದಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋ ನಿರ್ಮಾಣಕ್ಕೂ ಮನವಿ ಸಲ್ಲಿಸಿರುವುದರಿಂದ ಆ ಬಗ್ಗೆಯೂ ಗಮನಹರಿಸಲಾಗುವುದು ಎಂದು ತಿಳಿಸಿದರು.
ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಕೂಡ್ಲಿಗಿ ಸಾರಿಗೆ ಸಂಸ್ಥೆ ಘಟಕಕ್ಕೆ ನೂತನ ಬಸ್‌ಗಳನ್ನು ನೀಡುವಂತೆ ಸಲ್ಲಿಸಿದ ಮನವಿಗೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಯವರು ಒಂದು  ವರ್ಷದಲ್ಲಿ 19 ಬಸ್‌ಗಳನ್ನು ನೀಡಿದ್ದಾರಲ್ಲದೆ, ಇನ್ನಷ್ಟು ಹೊಸ ಬಸ್‌ಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ತಾಲೂಕು ಕೇಂದ್ರದಲ್ಲಿರುವ ಸಾರಿಗೆ ಬಸ್ ನಿಲ್ದಾಣವು ತೀರಾ ಹಳೆಯದಾಗಿದ್ದು, ಹೈಟೆಕ್ ಬಸ್ ನಿಲ್ದಾಣಕ್ಕೂ ಅನುದಾನ ನೀಡುವ ಮೂಲಕ ಹಿಂದುಳಿದ ತಾಲೂಕಿನ ಅಭಿವೃದ್ಧಿಗೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ವಿಭಾಗೀಯ ಸಂಚಾರ ಅಧಿಕಾರಿ ವಾಜಂತ್ರಿ, ಆಡಳಿತಾಧಿಕಾರಿ ದೇವರಾಜ, ಘಟಕ ವ್ಯವಸ್ಥಾಪಕ ಮರಿಲಿಂಗಪ್ಪ, ಪಪಂ ಸದಸ್ಯ ಕಾವಲಿ ಶಿವಪ್ಪ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ಧನಗೌಡ, ಜಿಪಂ ಮಾಜಿ ಸದಸ್ಯ ಕೆ.ಎಂ.ಶಶಿಧರ,ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣ ತಮ್ಮಣ್ಣ, ಬಸಣ್ಣ,  ಮುಖಂಡರಾದ ಕೋಗಳಿ ಮಂಜುನಾಥ, ವೀರಭದ್ರಪ್ಪ, ಶಫಿವುಲ್ಲಾ ಮಾದಿಹಳ್ಳಿ ನಜೀರ್, ದಿನ್ನೆ ಮಲ್ಲಿಕಾರ್ಜುನ, ಜಯರಾಮ್ ನಾಯಕ, ಬಣವಿಕಲ್ಲು ಯರಿಸ್ವಾಮಿ, ಟಿ.ಜಿ.ಮಲ್ಲಿಕಾರ್ಜುನಗೌಡ, ಶಾಸಕರ ಆಪ್ತ ಸಹಾಯಕ ಮರುಳಸಿದ್ದಪ್ಪ ಸೇರಿ ಇತರರಿದ್ದರು.
ಸಚಿವರಿಗೆ ಮನವಿ ಸಲ್ಲಿಸಿದ ಸಾರಿಗೆ ನೌಕರರು
ಸಾರಿಗೆ ನೌಕರರ ವೇತನ ಪರಿಷ್ಸರಣೆ ವಿಳಂಬವಾಗಿ ಶೇ.೧೫ರಷ್ಟು ನೀಡಿದ್ದು, ಉಳಿದ ೩೮ ತಿಂಗಳ ಹಿಂಬಾಕಿ ವೇತನ ಒಚಿದೇ ಕಂತಿನಲ್ಲಿ ನೀಡುವುದು, ನೌಕರರಿಗೆ ಸರಿ ಸಮಾನ ವೇತನ, ವಸತಿ ನಿವೇಶನಗಳ ಹಂಚಿಕೆ ಸೇರಿ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ನೌಕರರಾದ ಮೆಹಬೂಬ್, ಜಿ.ಎಂ.ಮಹಾAತೇಶ್, ಜೆ.ಚಂದ್ರಮೌಳಿ, ಶಿವಮೂರ್ತಿ, ವೀರಣ್ಣ, ಮಂಜುನಾಥ ಹೆಗಡೆ ಸೇರಿ ಇತರರು ಮನವಿ ಸಲ್ಲಿಸಿದರು.