ಮೂರು ತಿಂಗಳಲ್ಲಿ ಹೊಸಪೇಟೆಯ ಟ್ರಕ್ ಟರ್ಮಿನಲ್ ಲೋಕಾರ್ಪಣೆ.
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ) ಜು11: ಇಲ್ಲಿನ ಟಿ.ಬಿ.ಡ್ಯಾಂ ನೀರು ಶುದ್ಧೀಕರಣ ಘಟಕದ ಸಮೀಪ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ದಿ.ದೇವರಾಜ ಅರಸು ಟ್ರಕ್‌ ಟರ್ಮಿನಲ್‌ನ ಕಾಮಗಾರಿ ಮೂರು ತಿಂಗಳೊಳಗೆ ಕೊನೆಗೊಂಡು ಉದ್ಘಾಟನೆಗೆ ಸಜ್ಜಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಖಾಸಗಿ ಕಾರ್ಯಕ್ರಮ ಪ್ರಯುಕ್ತ ಬಳ್ಳಾರಿಗೆ ಹೋಗಿದ್ದ ಸಚಿವರು ಬೆಂಗಳೂರಿಗೆ ವಾಪಸಾಗುವ ಮಾರ್ಗಮಧ್ಯೆ ನಿರ್ಮಾಣ ಹಂತದ ಟ್ರಕ್‌ ಟರ್ಮಿನಲ್‌ಗೆ ಭೇಟಿ ನೀಡಿ, ಕಾಮಗಾರಿ ವೀಕ್ಷಿಸಿದ ಬಳಿಕ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು. ‘35 ಎಕರೆ ಪ್ರದೇಶದಲ್ಲಿ ರೂ 35 ಕೋಟಿ ವೆಚ್ಚದಲ್ಲಿ ಈ ಟ್ರಕ್‌ ಟರ್ಮಿನಲ್ ನಿರ್ಮಾಣಗೊಳ್ಳುತ್ತಿದೆ. 294 ಟ್ರಕ್‌ಗಳು ಇಲ್ಲಿ ನಿಲುಗಡೆ ಮಾಡಬಹುದಾಗಿದೆ. ಅಧಿಕಾರಿಗಳಿಗೆ ಕೊಠಡಿಗಳು, ಚಾಲಕರಿಗೆ, ಕ್ಲೀನರ್‌ಗಳಿಗೆ 38 ಕೊಠಡಿಗಳು ನಿರ್ಮಾಣಗೊಳ್ಳುತ್ತಿವೆ. ಆಹಾರ, ಶೌಚಾಲಯ ಸಹಿತ ಎಲ್ಲಾ ವ್ಯವಸ್ಥೆಗಳೂ ಇಲ್ಲಿ ಇರಲಿವೆ’ ಎಂದು ಅವರು ಹೇಳಿದರು.
‘ಈ ಟರ್ಮಿನಲ್‌ಗೆ ಇನ್ನೂ ಸ್ವಲ್ಪ ಜಮೀನು ಬೇಕು. ಶಾಸಕರಿಗೆ, ಹುಡಾ ಅಧ್ಯಕ್ಷರಿಗೆ, ಜಿಲ್ಲಾಧಿಕಾರಿ ಅವರಿಗೆ ಈಗಾಗಲೇ ಈ ವಿಷಯ ತಿಳಿಸಲಾಗಿದೆ. ಕೆಕೆಆರ್‌ಡಿಬಿ ಮೂಲಕವೂ ಅನುದಾನ ಪಡೆಯಲು ಪ್ರಯತ್ನಿಸಲಾಗುತ್ತಿದೆ’ ಎಂದು ರಾಮಲಿಂಗಾ ರೆಡ್ಡಿ ಹೇಳಿದರು. ‘ಈ ಹಿಂದಿನ ಸರ್ಕಾರದಲ್ಲಿ ಟ್ರಕ್‌ ಟರ್ಮಿನಲ್ ನಿರ್ಮಾಣಕ್ಕೆ ಆದ್ಯತೆ ಕೊಟ್ಟಿರಲಿಲ್ಲ. ಆದರೆ ನಾವು ಇದಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದೇವೆ. ಮೈಸೂರಿನಲ್ಲಿ ಈಚೆಗೆ ಒಂದು ಟರ್ಮಿನಲ್ ಉದ್ಘಾಟನೆಯಾಗಿದೆ. ಇನ್ನೂ ಐದಾರು ಕಡೆಗಳಲ್ಲಿ ಟರ್ಮಿನಲ್‌ಗಳ ಕಾಮಗಾರಿ ನಡೆಯುತ್ತಿದೆ’ ಎಂದು ಸಚಿವರು ತಿಳಿಸಿದರು.
One attachment • Scanned by Gmail