ವಿದ್ಯುತ್ ವಿಭಾಗೀಯ ಕಚೇರಿ ಇದೆ ಮೀಟರ್ ಔಟ್‍ಲೇಟ್‍ನ್ನು ತೆರೆದಿಲ್ಲ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಜು.11 ಪಟ್ಟಣದಲ್ಲಿ ವಿದ್ಯುತ್ ವಿಭಾಗೀಯ ಕಚೇರಿ ಇದೆ. ಆದರೆ, ಮಾಡಿರುವ ಕೆಸಲಗಳಿಗೆ ಸರಿಯಾಗಿ ಪ್ರತಿಫಲ ಪಡೆಯುವಲ್ಲಿ ವಿದ್ಯುತ್ ಗುತ್ತಿಗೆದಾರರ ಅಲೆದಾಟ ತಪ್ಪಿಲ್ಲವೆಂದು ವಿದ್ಯುತ್ ಗುತ್ತಿಗೆದಾರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಎನ್.ಎಂ.ಗೌಸ್ ಆರೋಪಿಸಿದರು.
ಪಟ್ಟಣದ ಜೆಸ್ಕಾಂ ಕಚೇರಿ ಆವರಣದಲ್ಲಿ ಮಂಗಳವಾರ ಕಾರ್ಯನಿರ್ವಾಹಕ ಅಭಿಯಂತರರಿಗೆ ಸಂಘದಿಂದ ಮನವಿಪತ್ರ ಸಲ್ಲಿಸಿ ಬಳಿಕ ಅವರು ಮಾತನಾಡಿದರು. ಇಲ್ಲಿ ವಿಭಾಗೀಯ ಕಚೇರಿ ಪ್ರಾರಂಭವಾಗಿ 8 ವರ್ಷಗಳೇ ಕಳೆದಿದ್ದರೂ, ಇಲ್ಲಿಯವರೆಗೂ ಮೀಟರ್ ಔಟ್‍ಲೇಟ್‍ನ್ನು ತೆರೆದೇ ಇಲ್ಲ, ವಿಭಾಗೀಯ  ಕಚೇರಿಗೆ ತಾಲೂಕಿನ ಸುತ್ತಮುತ್ತಲಿನ ತಾಲೂಕುಗಳಾದ ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿ, ಸೇರಿದಂತೆ ಹರಪನಹಳ್ಳಿ ತಾಲೂಕಿನ ವಿದ್ಯುತ್ ಗ್ರಾಹಕರು ಹಾಗೂ ವಿದ್ಯುತ್ ಗುತ್ತಿಗೆದಾರರಿಗೂ ಇಲ್ಲಿ ಮೀಟರ್ ಔಟ್‍ಲೇಟ್ ಇಲ್ಲದ ಕಾರಣ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಈ ಕೂಡಲೇ ಮೀಟರ್ ಔಟ್‍ಲೇಟ್‍ನ್ನು ಪಟ್ಟಣದಲ್ಲಿ ತೆರೆಯುವ ಮೂಲಕ ಎಲ್ಲಾ ತಾಲೂಕಿನ ಗ್ರಾಹಕರಿಗೂ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದರು.
ಜೆಸ್ಕಾಂ ಕಾರ್ಯನಿರ್ವಹಕ ಅಭಿಯಂತರರಾದ ಹುಸೇನ್‍ಸಾಬ್ ಮನವಿ ಸ್ವೀಕರಿಸಿ, ಈಗಾಗಲೇ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಆದಷ್ಟು ಬೇಗನೆ ಈ ಭಾಗದಲ್ಲಿ ಮೀಟರ್ ಔಟ್‍ಲೇಟ್‍ನ್ನು ತೆರೆಯಲು ಇಲಾಖೆಯಿಂದ ನಾವು ಮನವಿ ಮಾಡಿಕೊಂಡಿದ್ದೇವೆ. ನಿಮ್ಮ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದರು.
ಈ ಸಂದರ್ಭದಲ್ಲಿ ವಿದ್ಯುತ್ ಗುತ್ತಿಗೆದಾರರಾದ ಬಿ.ಎಂ.ಎಸ್.ಮಂಜುನಾಥ, ಬ್ಯಾಡಗಿ ಶಂಕರ್, ವಾಗೀಶ್, ಕೊಟ್ರೇಶ್, ಕಿರಣ್, ತಂಬ್ರಹಳ್ಳಿ ಕೊಟ್ರೇಶ್ ಮತ್ತಿತರರು ಇದ್ದರು.