ಸದಭಿರುಚಿಯ ಚಲನಚಿತ್ರಗಳನ್ನು ಪ್ರೋತ್ಸಾಹಿಸಿ -ಮಂಜಮ್ಮ ಜೋಗತಿ
ಸಂಜೆವಾಣಿ ವಾರ್ತೆ
ಬಳ್ಳಾರಿ ಜುಂ 11. ಕನ್ನಡಿಗರು ಅದರಲ್ಲೂ ಹೊಸ ತಲೆಮಾರಿನವರು  ಕನ್ನಡ ಭಾಷೆಯ ಸದಭಿರುಚಿಯ ಚಲನ ಚಿತ್ರಗಳನ್ನು ಪ್ರೋತ್ಸಾಹಿಸಬೇಕಾದ ಅಗತ್ಯವಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಾತಾಶ್ರೀ ಮಂಜಮ್ಮ ಜೋಗತಿ ಹೇಳಿದರು.
ಅವರು  ಸರಳಾದೇವಿ ಕಾಲೇಜಿನಲ್ಲಿ ನಾಟಕ ವಿಭಾಗದ ವತಿಯಿಂದ ಆಯೋಜಿಸಿದ್ದ ಕುಬಸ ಚಲನಚಿತ್ರ ಪ್ರಚಾರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುಂ.ವೀರಭದ್ರಪ್ಪನವರು ಬರೆದ ಕುಬಸ ಸಣ್ಣ ಕಥೆಯನ್ನು ಆಧರಿಸಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಬದುಕಿನುದ್ದಕ್ಕೂ ಕುಬಸ ಹಾಕದೇ ಜೀವನ ಸಾಗಿಸಿದ ಬೋವಿ ಸಮುದಾಯದ ಮಹಿಳೆಯ ಕಥೆಯಿದು. ಇದರಲ್ಲಿ ಆಕೆಯ ಪ್ರೇಮ, ನೋವು, ನಿಟ್ಟುಸಿರು,ತಲ್ಲಣಗಳಿವೆ. ಸಂಕಷ್ಟಗಳ ಬದುಕನ್ನು ದಿಟ್ಟತನದಿಂದ ಎದುರಿಸಿ ಯಶಸ್ವಿಯಾದ ಮಹಿಳೆಯ ಜೀವನಾನುಭವ ಕಥೆಯೊಂದು ಚಲನ ಚಿತ್ರದುದ್ದಕ್ಕೂ ತೆರೆದುಕೊಂಡಿದೆ ಎಂದರು.
ಈ ಚಿತ್ರದ ವಿಶೇಷವೆಂದರೆ ನಿರ್ಮಾಪಕರು, ನಿರ್ದೇಶಕರು ಮತ್ತು ಕಲಾವಿದರು ಬಳ್ಳಾರಿ ಜಿಲ್ಲೆಗೆ ಸೇರಿದವರೇ ಎನ್ನುವುದು. ನಮ್ಮವರನ್ನು ನಾವೇ ಬೆಳೆಸಿ ಪ್ರೋತ್ಸಾಹಿಸಬೇಕು. ಆ ಕಾರಣಕ್ಕಾಗಿ ಹೆಚ್ಚು ಜನ ಈ ಸಿನಿಮಾವನ್ನು ನೋಡಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ.ಎಚ್.ಕೆ.ಮಂಜುನಾಥರೆಡ್ಡಿ ಒಳ್ಳೆಯ ಸಿನಿಮಾ ಮನೋರಂಜನೆಯ  ಜೊತೆಗೆ ಮೌಲ್ಯ, ಆದರ್ಶಗಳನ್ನು ಕಟ್ಟಿಕೊಡುತ್ತೆ. ಸಂಸ್ಕೃತಿಯ ಘನತೆಯನ್ನು ಎತ್ತಿ ಹಿಡಿಯುತ್ತದೆ ಎಂದರು.
ವೇದಿಕೆ ಮೇಲೆ ನಾಟಕ ವಿಭಾಗದ   ಮುಖ್ಯಸ್ಥರಾದ ಡಾ. ದಸ್ತಗೀರಸಾಬ್ ದಿನ್ನಿ , ಸಿನಿಮಾ ನಿರ್ಮಾಪಕರಾದ ಶೋಭಾ ಆದಿನಾರಾಯಣ, ಗುಂಡಿ ಭಾರತಿ ರಮೇಶ್, ಮಾತೃ ಮಹಿಳಾ ಸಂಸ್ಥೆಯ ಪುಷ್ಪಾವತಿ, ಏಕಲವ್ಯ ಟ್ರಸ್ಟಿನ ಮಂಜುಳಾ, ಪ್ರಗತಿ ಸೇವಾ ಸಂಘದ ಚಾಂದಿನಿ, ಸಹ ನಿರ್ದೇಶಕರಾದ ಶಿವಮೂರ್ತಿ ಇದ್ದರು.
ಈ ಸಂದರ್ಭದಲ್ಲಿ ನಾಟಕದ ವಿಭಾಗದ ಅತಿಥಿ ಉಪನ್ಯಾಸಕರಾದ ವಿಷ್ಣು ಹಡಪದ್ , ನೇತಿ ರಘುರಾಮ್, ಲೇಖಕ ಮಲ್ಲಪ್ಪ ಉಪಸ್ಥಿತರಿದ್ದರು.