21ರಂದು ಲಿಂಗಾಯತ ಮಹಾಸಭಾದ ಚುನಾವಣೆ
ಸಂಜೆವಾಣಿ ನ್ಯೂಸ್
ಮೈಸೂರು.ಜು.11:- ಜು.21ರಂದು ನಡೆಯಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮೈಸೂರು ಜಿಲ್ಲಾ ಘಟಕದ ಚುನಾವಣೆ ಹಿನ್ನಲೆ ಹಿನಕಲ್ ಬಸವರಾಜು ತಂಡದಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.
ನಗರದ ನಟರಾಜ ಕಾಲೇಜು ಸಭಾಂಗಣದಲ್ಲಿ ಬುಧವಾರ ಬೆಳಗ್ಗೆ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಿನಕಲ್ ಬಸವರಾಜು, 20 ಪುರುಷ ಮತ್ತು 10 ಮಹಿಳಾ ಸದಸ್ಯರು, ಸಮುದಾಯದ ಹಿರಿಯ ಮುಖಂಡರ ಸಮ್ಮುಖದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹಿನಕಲ್ ಬಸವರಾಜು ಮಾತನಾಡಿ, 5 ವರ್ಷದ ಹಿಂದೆಯೂ ನಾನು ಅಧ್ಯಕ್ಷನಾಗಿ ಸಮುದಾಯದ ಪರವಾಗಿ ಹತ್ತು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ 15 ಸಾವಿರ ಸದಸ್ಯರನ್ನು ಮಾಡಿದ್ದೇನೆ. ಹೀಗಾಗಿ ರಾಜ್ಯದಲ್ಲಿ ಮೈಸೂರು ಜಿಲ್ಲೆಯಲ್ಲಿಯೇ ಹೆಚ್ಚು ಸದಸ್ಯರು ಇದ್ದಾರೆ. ಇದಕ್ಕೆ ನನ್ನ ಕ್ರಿಯಾಶೀಲತೆ ಕಾರಣ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಂಘಟನೆಯನ್ನು ಮತ್ತಷ್ಟು ಶಕ್ತಿಶಾಲೆಯಾಗಿ ಕಟ್ಟುವುದು ನಮ್ಮ ಉದ್ಧೇಶವಾಗಿದೆ. ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಈ ಚುನಾವಣೆಯಲ್ಲಿ ನಾವು ಒಂದು ಸಮಾನ ಮನಸ್ಕರ ತಂಡ ಕಟ್ಟಿಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮ ಸಂಘಟನೆಯ ಅಧೀನದಲ್ಲಿರುವ ಸಿಎ ನಿವೇಶನದಲ್ಲಿ ನಾವು ಸುಂದರವಾದ ಬಸವ ಭವನ ಕಟ್ಟಲು ಉದ್ದೇಶಿಸಿದ್ದೇವೆ ಎಂದರು.
ಅಲ್ಲದೇ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಜಿಲ್ಲಾದ್ಯಂತ ಕಾನೂನು ಘಟಕ, ವಿದ್ಯಾರ್ಥಿ, ನೌಕರರು ಮತ್ತು ಕೃಷಿಕರ ವಿಭಾಗಗಳ ಪ್ರತ್ಯೇಕ ಘಟಕಗಳನ್ನು ಸ್ಥಾಪಿಸಲಾಗುವುದು. ಸದಸ್ಯತ್ವ ಹೆಚ್ಚಳ, ಶರಣದ ಸಂದೇಶ ಸಾರುವ ಕಾರ್ಯಕ್ರಮ ಆಯೋಜನೆ, ಜಿಲ್ಲಾ ಕೇಂದ್ರದಲ್ಲಿ ವಿದ್ಯಾರ್ಥಿನಿಲಯ ಸ್ಥಾಪನೆ, ಕಾಯಕ ತತ್ವ, ದಾಸೋಹದ ಬಗ್ಗೆ ಪ್ರಚಾರ, ಉನ್ನತ ಶಿಕ್ಷಣಕ್ಕಾಗಿ ಬಡ ವಿದ್ಯಾರ್ಥಿಗಳಿಗೆ ಸಹಾಯ, ಕೌಶಲ್ಯ ತರಬೇತಿ ಕೇಂದ್ರಗಳ ಸ್ಥಾಪನೆ, ಸಮುದಾಯದ ಅಭಿವೃದ್ಧಿಗಾಗಿ ದುಡಿದವರ ಸಂಸ್ಮರಣೆ, ವಿಚಾರಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿ ಹೊಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಮುದಾಯದ ಹಿರಿಯ ಮುಖಂಡರಾದ ಎನ್.ಎಸ್.ಬಸವರಾಜು, ಮಾಜಿ ಮೇಯರ್ ದಕ್ಷಿಣಮೂರ್ತಿ, ಎಂ.ಎನ್.ಜ್ಞಾನಶಂಕರ್, ಪ್ರದೀಪ್ ಕುಮಾರ್, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ಟಿ.ಎಸ್.ಲೋಕೇಶ್, ಡಿ.ಎ.ಮಹದೇವಸ್ವಾಮಿ, ದಾರಿಪುರ ಡಿ.ಚಂದ್ರಶೇಖರ್ ಇದ್ದರು.