ಮುಡಾ ಮುತ್ತಿಗೆ ಯತ್ನ: ಪ್ರತಿಭಟನಾಕಾರರ ಬಂಧನ
ಸಂಜೆವಾಣಿ ನ್ಯೂಸ್
ಮೈಸೂರು.ಜು.11:- ಮುಡಾದ 50:50 ನಿವೇಶನ ಹಂಚಿಕೆಯಲ್ಲಿನ ಬಹುಕೋಟಿ ಹಗರಣ ಖಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‍ಎಸ್) ಪಕ್ಷದ ಕಾರ್ಯಕರ್ತರನ್ನು ಪೆÇಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು.
ಮೆರವಣಿಗೆ ಮೂಲಕ ಸಾಗಿ ಮುಡಾಗೆ ಮುತ್ತಿಗೆ ಹಾಕಲು ಗನ್‍ಹೌಸ್ ಬಳಿ ಜಮಾಯಿಸಿದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಿ, ಮುಡಾದ 50:50 ಹಗರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಲಿ ಇತ್ಯಾದಿ ಬರಹವುಳ್ಳ ಫಲಕ ಪ್ರದರ್ಶಿಸಿದರು. ಘೋಷಣೆ ಕೂಗುತ್ತಾ ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಪಾದಯಾತ್ರೆಯ ಮೂಲಕ ಧಾವಿಸಿದರು. ಪೆÇಲೀಸರು ಅವರನ್ನು ತಡೆದು ಬಂಧಿಸಿದರು.
ಇನ್ನೊಂದೆಡೆ ಬೇರೆ ಬೇರೆ ಕಡೆಯಿಂದ ಬಂದ ಪ್ರತಿಭಟನಾಕಾರರು ರೈಲ್ವೇ ನಿಲ್ದಾಣದ ಬಳಿ ಒಟ್ಟು ಸೇರಿ ಮುಡಾ ಕಚೇರಿ ಕಡೆಗೆ ಹೆಜ್ಜೆ ಹಾಕಿದರು. ಘೋಷಣೆಗಳನ್ನು ಕೂಗುತ್ತಾ ಧಾವಿಸಿದರು. ರೋಟರಿ ಶಾಲೆಯ ಬಳಿಯ ವೃತ್ತದಲ್ಲಿ ಅವರನ್ನು ಪೆÇಲೀಸರು ತಡೆದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೆÇಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾಕಾರರು ಬ್ಯಾರಿಕೇಡ್ ದಾಟಿ ಮುನ್ನುಗ್ಗಲು ಯತ್ನಿಸಿದಾಗ ಅವರನ್ನೂ ಬಂಧಿಸಿ, ಕರೆದೊಯ್ದರು.
ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಮಾತನಾಡಿ, ಸಿದ್ದರಾಮಯ್ಯ 50:50 ಸಿಎಂ ಆಗಿದ್ದು, ಕೇವಲ ಮುಡಾದಲ್ಲಿ ಅಕ್ರಮವಾಗಿ 50:50 ಸೈಟ್ ಪಡೆಯದೆ ವಿರೋಧ ಪಕ್ಷಗಳೊಂದಿಗೆ 50:50 ಹೊಂದಾಣಿಕೆ ರಾಜಕೀಯವನ್ನೂ ಮಾಡುತ್ತಿದ್ದಾರೆ. ಅವರು ಸಾರ್ವಜನಿಕ ಜೀವನದಲ್ಲಿ ಮುಂದುವರೆಯಲು ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೈಟ್‍ಗಳಾಗಿ ಮಾರಾಟವಾಗಿರುವ ಜಮೀನನ್ನು ಬೇನಾಮಿ ಮೂಲಕ ಕೊಂಡು, ದಾನಪತ್ರದ ಮೂಲಕ ಪತ್ನಿಯ ಹೆಸರಿಗೆ ವರ್ಗಾಯಿಸಿಕೊಂಡು, ಈಗ ಬಿಜೆಪಿಯವರು ಕೊಟ್ಟಿದ್ದಾರೆ, ನಾನು ತೆಗೆದುಕೊಂಡಿದ್ದೇನೆ ಎಂದು ನಿರ್ಲಜ್ಜೆಯಿಂದ ಮಾತನಾಡುತ್ತಿದ್ದಾರೆ. ಈ ಹಿಂದೆ ಅರ್ಕಾವತಿ ರೀಡೂ ಪ್ರಕರಣದಿಂದ ಪಾರಾಗಲು ಲೋಕಾಯುಕ್ತವನ್ನು ಮುಚ್ಚಿದ ಅಪಖ್ಯಾತಿ ಹೊಂದಿದ್ದಾರೆ. ಇವರನ್ನು ಮುಖ್ಯಮಂತ್ರಿಯಾಗಿ ಮಾಡಿ ಮತ್ತಷ್ಟು ಅಕ್ರಮಗಳನ್ನು ಮಾಡಲು ಕಾಂಗ್ರೆಸ್ ಪಕ್ಷ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಎನ್.ದೀಪಕ್, ಕಾರ್ಯದರ್ಶಿ ರಘು ಜಾಣಗೆರೆ, ರಘುಪತಿ ಭಟ್, ವಿಜಯ ರಾಘವ ಮರಾಠೆ, ಎಸ್.ಮಂಜುನಾಥ್, ಕೆ.ಎಸ್.ಸೋಮಸುಂದರ್, ಎಂ.ರವಿಕುಮಾರ್, ಎಚ್.ಎಂ.ಅರುಣ ಕುಮಾರ, ಮೈಸೂರು ಜಿಲ್ಲಾಧ್ಯಕ್ಷ ಸುಂದರ್ ಪ್ರೇಮ್ ಕುಮಾರ್ ಇದ್ದರು.