ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು.ಜು.11:- ಕಾರ್ಮಿಕ ಸಂಘಟನೆಗಳ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಸದಸ್ಯರು ಪುರಭವನದ ಮುಂಭಾಗ ಬುಧವಾರ ಪ್ರತಿಭಟಿಸಿದರು.
ಅಗತ್ಯ ವಸ್ತುಗಳ ಬೆಲೆಯೇರಿಕೆ ನಿಯಂತ್ರಿಸಬೇಕು. ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ, ಬಡವರಿಗೆ ಬದುಕಲು ಅವಕಾಶ ಕಲ್ಪಿಸುವ ಯೋಜನೆ ಜಾರಿಗೊಳಿಸಬೇಕು. ರೈತ ವಿರೋಧಿ ಕೃಷಿ ಕಾನೂನು ವಾಪಸ್ ಪಡೆಯಬೇಕು. ಕೃಷಿ ಬೆಲೆಗಳಿಗೆ ಲಾಭದಾಯಕ ಬೆಂಬಲ ಬೆಲೆ ಘೋಷಿಸಿ ರೈತಪರ ನಿಲುವು ಹೊಂದಬೇಕು ಎಂದು ಒತ್ತಾಯಿಸಿದರು.
ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯಬೇಕು. ಸಾರ್ವಜನಿಕ ಕ್ಷೇತ್ರದ ಖಾಸಗೀಕರಣ ಕೈ ಬಿಡಬೇಕು. ಶಿಕ್ಷಣವನ್ನು ದುಬಾರಿಗೊಳಿಸುವ ಹಾಗೂ ಅವೈಜ್ಞಾನಿಕ ಹೊಸ ಶಿಕ್ಷಣ ನೀತಿ ಜಾರಿಗೊಳಿಸಬಾರದು. ಕಾರ್ಮಿಕರ ಕೆಲಸದ ಅವಧಿಯನ್ನು ವಾರಕ್ಕೆ 36 ಗಂಟೆ ಹಾಗೂ ದಿನದ ಪಾಳಿಯನ್ನು ಗಂಟೆಗೆ ಮಿತಿಗೊಳಿಸಿ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ಸಂಘಟನೆಗಳಿಗೆ ಕಡ್ಡಾಯ ಮಾನ್ಯತೆ ನೀಡುವ ಕಾನೂನು ಜಾರಿಗೆ ಬರಬೇಕು. ಇಎಸ್‍ಐ, ಇಪಿಎ, ಗ್ರಾಚ್ಯುಟಿ, ಬೋನಸ್ ಕಾಯಿದೆಯಲ್ಲಿ ವಿಧಿಸಿರುವ ವೇತನದ ಮಿತಿ ಹಿಂಪಡೆಯಬೇಕು. ಹೊಸ ಪಿಂಚಣಿ ಕಾಯ್ದೆಯನ್ನು ವಾಪಸ್ ಪಡೆದು ಹಳೆ ಪಿಂಚಣಿ ಯೋಜನೆಯನ್ನೇ ಮುಂದುವರೆಸಬೇಕು. ಸಾರಿಗೆ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಕಲ್ಯಾಣ ಮಂಡಳಿ ರೂಪಿಸಿ. ಕಾರ್ಮಿಕ ಕಾಯ್ದೆಗಳಿಂದ ಐಟಿ ಮತ್ತು ಐಟಿಇಎಸ್ಗೆ ವಿನಾಯಿತಿ ನೀಡುವ ಯೋಜನೆ ರದ್ದುಗೊಳಿಸಿ ಎಂದು ಒತ್ತಾಯಿಸಿದರು.
ಜಿಲ್ಲಾ ಅಧ್ಯಕ್ಷ ಜಿ.ಜಯರಾಂ, ಪ್ರಧಾನ ಕಾರ್ಯದರ್ಶಿ ಬಾಲಾಜಿರಾವ್, ಮುಖಂಡರಾದ ಲತಾ, ಬಸವಯ್ಯ, ಚನ್ನಕೇಶವ, ಬಲರಾಂ, ಸುಬ್ರಹ್ಮಣ್ಯ, ಚಂದ್ರಶೇಖರ್ ಸೇರಿದಂತೆ ಹಲವರು ಭಾಗವಹಿಸಿದ್ದರು.