ರೈತರಿಗೆ ವಿಮೆ ಹಣ ಪಾವತಿಸುವಂತೆ ರೈತಸಂಘ ಒತ್ತಾಯ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.11: ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಪಾವತಿಸಿರುವ ರೈತರಿಗೆ ಬೆಳೆ ನಷ್ಠ ಪರಿಹಾರ ನೀಡುವಲ್ಲಿ ವಿಮಾ ಕಂಪನಿ ತಾಲೂಕಿನ ರೈತರಿಗೆ ವಂಚನೆ ಮಾಡಿದ್ದು ಬೆಳೆ ನಷ್ಠಕ್ಕೆ ಒಳಗಾಗಿರುವ ಎಲ್ಲಾ ರೈತರಿಗೆ ತಕ್ಷಣವೇ ಬರಪರಿಹಾರದ ವಿಮೆ ಹಣ ಪಾವತಿಸುವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ.
ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ನೇತೃತ್ವದಲ್ಲಿ ಪಟ್ಟಣದ ರೈತಸಂಘದ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರೈತ ಮುಖಂಡರು ವಿಮಾ ಕಂಪನಿ ಪರಿಹಾರ ನೀಡಿಕೆಯಲ್ಲಿ ಮಾಡಿರುವ ವಂಚನೆಯನ್ನು ಖಂಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ವಿ.ರಾಜೇಗೌಡ ಕಳೆದ ವರ್ಷ ತಾಲೂಕಿನಲ್ಲಿ ತೀವ್ರವಾದ ಬರಗಾಲವಿದ್ದು ತಾಲೂಕಿನ ಎಲ್ಲಾ ಹೋಬಳಿಗಳ ವ್ಯಾಪ್ತಿಯಲ್ಲಿಯೂ ರೈತರು ಬೆಳೆ ನಷ್ಠಕ್ಕೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರದ ಬೆಳೆ ವಿಮೆ ನೀತಿಗೆ ಅನುಗುಣವಾಗಿ ತಾಲೂಕಿನ ಬಹುತೇಕ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಬೆಳೆ ನಷ್ಠಕ್ಕೆ ಒಳಗಾದ ಎಲ್ಲಾ ರೈತರಿಗೂ ವಿಮೆ ನೀತಿಗೆ ಅನುಗುಣವಾಗಿ ಬೆಳೆ ಪರಿಹಾರ ನೀಡಬೇಕಾದ ಕಂಪನಿ ತಾಲೂಕಿನ ಸಂತೇಬಾಚಹಳ್ಳಿ, ಕಿಕ್ಕೇರಿ ಮತ್ತು ಅಕ್ಕಿಹೆಬ್ಬಾಳು ಹೋಬಳಿಯ ರೈತರಿಗೆ ಮಾತ್ರ ಬೆಳೆ ನಷ್ಠ ಪರಿಹಾರದ ಹಣ ನೀಡಿ ಉಳಿದ ಬೂಕನಕೆರೆ, ಕಸಬಾ ಮತ್ತು ಶೀಳನೆರೆ ಹೋಬಳಿಯ ರೈತರಿಗೆ ಪರಿಹಾರದ ಹಣ ನೀಡದೆ ವಂಚಿಸಿದೆ ಎಂದು ದೂರಿದರು. ವಿಮಾ ಕಂನಿಯ ವಂಚನೆಯ ಬಗ್ಗೆ ಇತ್ತೀಚೆಗೆ ಬೂಕನಕೆರೆಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಜನಸ್ಪಂದನಾ ಸಭೆಯಲ್ಲಿ ತಾಲೂಕು ರೈತಸಂಘ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿ ವಂಚಿತ ರೈತ ಸಮುದಾಯಕ್ಕೆ ಬೆಳೆ ನಷ್ಠ ಪರಿಹಾರ ಕೊಡಿಸುವಂತೆ ಮನವಿ ಮಾಡಿತ್ತು. ಜಿಲ್ಲಾಧಿಕಾರಿಗಳಿಗೆ ರೈತಸಂಘ ದೂರು ನೀಡಿದ ಅನಂತರ ವಿಮಾ ಕಂಪನಿ ಬೂಕನಕೆರೆ ಮತ್ತು ಶೀಳನೆರೆ ಹೋಬಳಿಗಳಲ್ಲಿ ಸೇ 66 ರಷ್ಟು ಹಾಗೂ ಕಸಬಾ ಹೋಬಳಿಯಲ್ಲಿ ಶೇ 60 ರಷ್ಟು ಬೆಳೆ ನಷ್ಠವಾಗಿರುವುದನ್ನು ಒಪ್ಪಿಕೊಂಡಿದ್ದು ಬೆಳೆ ನಷ್ಠ ಪರಿಹಾರಕ್ಕಾಗಿ 9 ಕೋಟಿ ಹಣ ಬಿಡುಗಡೆ ಮಾಡಿದೆ ಎಂದು ತಿಳಿದು ಬಂದಿದೆ. ಜಿಲ್ಲಾಧಿಕಾರಿಗಳು ತಕ್ಷಣವೇ ಕ್ರಮ ವಹಿಸಿ ಬೆಳೆ ನಷ್ಠಕ್ಕೆ ಒಳಗಾಗಿರುವ ಬೂಕನಕೆರೆ, ಶೀಳನೆರೆ ಮತ್ತು ಕಸಬಾ ಹೋಬಳಿಯ ರೈತರಿಗೂ ಪರಿಹಾರ ಹಣವನ್ನು ವಿತರಿಸುವಂತೆ ಎಂ.ವಿ.ರಾಜೇಗೌಡ ಆಗ್ರಹಿಸಿದರು.