ಚಾಮರಹಳ್ಳಿ-ಹುನುಕುಂದ ಮುಖ್ಯರಸ್ತೆ ದುರಸಿಗೆ ಒತ್ತಾಯ
ಕೋಲಾರ,ಜು.೧೧- ಕೋಲಾರ – ಬೇತಮಂಗಲ ಮುಖ್ಯರಸ್ತೆ ಮತ್ತು ಚಾಮರಹಳ್ಳಿ-ಹುನುಕುಂದ ಮುಖ್ಯರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ಕೂಡಲೇ ದುರಸ್ಥಿತಿಗೊಳಿಸುವಂತೆ ನಮ್ಮ ಕೋಲಾರ ರೈತ ಸಂಘದ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶಗೌಡ ಲೋಕೋಪಯೋಗಿ ಒಳನಾಡು ಬಂದರು ಜಲಸಾರಿಗೆ ಇಲಾಖೆ ಅಭಿಯಂತರರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿ ಸಲ್ಲಿಸಿ ಮಾತನಾಡಿದ ಗಣೇಶಗೌಡ, ಕೋಲಾರ-ಬೇತಮಂಗಲ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿರುತ್ತವೆ. ಅಲ್ಲದೇ ಈ ರಸ್ತೆಯು ರಾಜ್ಯ ಹೆದ್ದಾರಿಯಾಗಿದ್ದು, ಪ್ರಮುಖವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳಿಗಳು ಇರುತ್ತವೆ. ಹಳ್ಳಿಗಳ ರೈತರು ತಾವು ಬೆಳೆದ ತರಕಾರಿಗಳನ್ನು ಕೋಲಾರ ಹಾಗೂ ಬೇತಮಂಗಲ ಮಾರ್ಗವಾಗಿ ನೆರೆಯ ಆಂಧ್ರಪ್ರದೇಶದ ವಿಕೋಟೆಗೆ ಮಾರಾಟ ಮಾಡಲು ಹೋಗುತ್ತಾರೆ. ಹೀಗಿರುವಾಗ ಈ ರಸ್ತೆಯು ನೆರೆಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಕೋಲಾರ- ಬೇತಮಂಗಲ ಮುಖ್ಯರಸ್ತೆಯ ಚಾಮರಹಳ್ಳಿ-ಹುನುಕುಂದ ಮುಖ್ಯರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ಮಳೆ ಬಂದರೆ ರಸ್ತೆಯು ಕೆಸರು ಗದ್ದೆಗಳಾಗಿ ಮಾರ್ಪಡುತ್ತದೆ. ವಾಹನಗಳು ಓಡಾಡಲು ಹರಸಾಹಸ ಪಡಬೇಕಾಗುತ್ತದೆ. ಇತ್ತೀಚೆಗಂತೂ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುತ್ತಾರೆ. ಅಲ್ಲದೇ ಅಪಘಾತಗಳು ಸಹ ನಡೆದು ವಾಹನ ಸವಾರರು ಗಂಭೀರವಾಗಿ ಗಾಯಗೊಂಡಿರುತ್ತಾರೆ.
ರಸ್ತೆಯನ್ನು ದುರಸ್ಥಿಗೊಳಿಸುವಂತೆ ಸುಮಾರು ಬಾರಿ ತಮ್ಮ ಇಲಾಖೆಗೆ ಮನವಿಗಳನ್ನು ಸಲ್ಲಿಸಿದರೂ ಇದುವರೆವಿಗೂ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದು ದೂರಿದರು.
ಆದ್ದರಿಂದ ತಾವುಗಳು ಈ ಕೂಡಲೇ ರಸ್ತೆಯನ್ನು ದುರಸ್ಥಿಗೊಳಿಸಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಬೇತಮಂಗಲ ಮುಖ್ಯರಸ್ತೆಯ ಗ್ರಾಮಗಳ ರೈತರೊಟ್ಟಿಗೆ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದ್ದಾರೆ.
ನಿಯೋಗದಲ್ಲಿ ಅಬ್ಬಣಿಮುನೇಗೌಡ, ಅಗ್ರಹಾರಸೋಮರಸನಹಳ್ಳಿ ನಾರಾಯಣ ಸ್ವಾಮಿ, ಕೆಂಬೋಡಿ ರವಿ, ಕುರುಬರಪೇಟೆ ರವಿ, ಆಂಜನೇಯ, ಶಿವು, ಮಾರ್ಜೇನ ಹಳ್ಳಿ ನಾರಾಯಣಸ್ವಾಮಿ, ಜೆಸಿಬಿ ನಾಗರಾಜ್ ಮತ್ತಿತರರು ಹಾಜರಿದ್ದರು.