ಸೆಪ್ಟಂಬರ ತಿಂಗಳಿನಲ್ಲಿ ಬೀದಿ ವ್ಯಾಪಾರಿಗಳ ಸರ್ವಸದಸ್ಯರ ಸಮಾವೇಶ: ಸೂರ್ಯವಂಶಿ
ಕಲಬುರಗಿ,ಜು.11- ಬೀದಿ ವ್ಯಾಪಾರಿಗಳಿಗೆ ಸಕಾಲದಲ್ಲಿ ಹಣಕಾಸಿನ ನೆರವು ಸಿಕ್ಕಲ್ಲಿ ಅವರ ವ್ಯಾಪಾರ ವಹಿವಾಟು ಚುರುಕು ಗೊಳ್ಳುತ್ತದೆ, ಈ ಮೂಲಕ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು ಹೇಳಿದರು.
ನಗರದ ಸುಪರ ಮಾರುಕಟ್ಟಿ ಸಿ.ಟಿ ಬಸ್ ನಿಲ್ದಾಣದ ಹತ್ತಿರು ಇರುವ ಸಂಘದ ಕಾರ್ಯಾಲಯದಲ್ಲಿ ಬುಧವಾರ ಜು.10ರಂದು ಜರುಗಿದ ಬೀದಿವ್ಯಾಪಾರಿಗಳ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಆಡಳಿತ ಮಂಡಳಿಯ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು, ಮಾತನಾಡಿದರು.
ಇದೇ ಬರುವ ಅಗಸ್ಟ ತಿಂಗಳಿನಲ್ಲಿ ಸಂಘದ 15ನೇ ವಾರ್ಷಿಕೋತ್ಸವ ಹಾಗೂ ಸೆಪ್ಟಂಬರ ತಿಂಗಳಿನಲ್ಲಿ ಸರ್ವ ಸದಸ್ಯರ ಮಹಾ ಸಮಾವೇಶ ನಡೆಸಲು ತಿರ್ಮಾನಿಸಿದ ಆಡಳಿತ ಮಂಡಳಿ, ಸರ್ವ ಸದಸ್ಯರ ಮಹಾ ಸಭೆ ಹಾಗೂ ಬೀದಿ ವ್ಯಾಪಾರಿಗಳ ಜಾಗೃತಿ ಸಮಾವೇಶಕ್ಕೆ ರಾಜ್ಯ ಸರ್ಕಾರದ ಸಚಿವರು, ಸೇರಿದಂತೆ ಚುನಾಯಿತ ಜನಪ್ರತಿನಿಧಗಳನ್ನು, ಗಣ್ಯಮಾನ್ಯರನ್ನು ಹಾಗೂ ಅಧಿಕಾರಿಗಳನ್ನು ಆಹ್ವಾನಿಸಲು ನಿರ್ಧರಿಸಲಾಯಿತು.
ಕಳೆದ ಒಂದುವರೆ ದಶಕಗಳಿಂದ ಈ ಸಂಘ ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ, ಬಹು ಸಂಖ್ಯೆಯಲ್ಲಿ ಸದಸ್ಯತ್ವ ಪಡೆದಿರುವ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ, ಸ್ವಚ್ಛತೆ, ತಮ್ಮ ವೃತ್ತಿ ಕಸುಬುಗಳಲ್ಲಿ ಕೈಗೊಳ್ಳಬೇಕಾದ ವೈಜ್ಞಾನಿಕ ತರಬೇತಿಯನ್ನು ಸಹ ನೀಡಲಾಗುತ್ತಿದೆ ಎಂದು ಸೂರ್ಯವಂಶಿ ಅವರು ಹೇಳಿದರು.
ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಕೈಗೊಳ್ಳಬೇಕಾಗ ಅಗತ್ಯ ಮುಂಜಾಗ್ರತೆಗಳ ಕುರಿತು ಬೀದಿ ಬದಿ ವ್ಯಾಪಾರಿಗಳಿಗೆ ಸಂಚಾರಿ ನಿಯಮಗಳ ಪಾಲನೆಯ ಮಾಹಿತಿಯನ್ನು ಸಹ ಸಂಘದ ವತಿಯಿಂದ ಕಾಲಕಾಲಕ್ಕೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಹಿರಿಯ ಪತ್ರಕರ್ತ ಹಾಗೂ ಸಮಾಜ ಸೇವಕರಾದ ಭವಾನಿ ಸಿಂಗ ಠಾಕೂರ ಅವರು, ಮಾತನಾಡಿ ಬೀದಿವ್ಯಾಪಾರಿಗಳು ಕಾಯಕ ಮತ್ತು ಶ್ರಮಿಕ ವರ್ಗಕ್ಕೆ ಸೇರಿದವರಾಗಿದ್ದಾರೆ. ಅಸಂಘಟಿತ ವಲಯಕ್ಕೆ ಸೇರಿದ ಈ ವರ್ಗವನ್ನು ಸಂಘಟಿಸಿ ಅವರಲ್ಲಿ ಜಾಗೃತಿ ಮತ್ತು ಸ್ವಾವಲಂಭನ ಬದುಕು ಕಟ್ಟಿಕೊಡಲು ಈ ಸಂಘ ಶ್ರಮಿಸುತ್ತಿದೆ. ಸಂಘದ ಅಭಿವೃದ್ದಿಗಾಗಿ ನಾವೆಲ್ಲರೂ ಐಕ್ಯತೆಯಿಂದ ಕೈಜೊಡಿಸುವ ಮೂಲಕ ಬೀದಿವ್ಯಾಪಾರಿಗಳ ಕಲ್ಯಾಣಕ್ಕೆ ಮುಂದಾಗಬೇಕು ಎಂದರು.
ಸಭೆಯಲ್ಲಿ ಸಂಘದ ನಿರ್ದೇಶಕರಾದ ಮಹೇಶ ಎನ್, ಕಲ್ಯಾಣ ಕುಮಾರ, ಎನ್.ರಾಮಚಂದ್ರ, ಭಾಗ್ಯಶ್ರೀ ಎನ್, ವೇಣುತಾ ಇ, ಜ್ಯೋತಿ ಎಸ್, ಸೈಯದ ಯುನೂಸ್, ಚಂದ್ರಹಾಸ, ಬಾಬುಮಿಯಾ, ಅಣ್ಣರಾವ ದುತ್ತರಗಾಂವ ಮತ್ತು ಭವಾನಿ ಸಿಂಗ್ ಠಾಕೂರ ಸೇರಿದಂತೆ ಹಲವರಿದ್ದರು.