ಶಾಲೆ ಜಾಗಕ್ಕೆ ಅತಿಕ್ರಮಪ್ರವೇಶ-ಕಾನೂನು ಕ್ರಮಕ್ಕೆ ಆಗ್ರಹ
ಕೋಲಾರ,ಜು,೧೧- ಸರ್ಕಾರಿ ಶಾಲೆಯ ಆವರಣದಲ್ಲಿದ್ದ ಸುಮಾರು ೨ ಲಕ್ಷ ಮೌಲ್ಯದ ನೀಲಗಿರಿ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿರುವ ಘಟನೆ ನಡೆದಿದ್ದು, ಅತಿಕ್ರಮಣ ನಡೆಸಿರುವವರ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹಿಸಿ ತ್ಯಾವನಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.
ಗ್ರಾಮದ ಗೋಮಾಳ ಜಮೀನು ಸರ್ವೆ ನಂ.೧೧೬ ರಲ್ಲಿನ ೨ ಎಕರೆ ಜಮೀನನ್ನು ಶಾಲೆಗೆ ಮಂಜೂರು ಮಾಡಿದ್ದು, ಇದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಹೆಸರಿನಲ್ಲಿ ಖಾತೆಯೂ ಆಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸದರಿ ಜಮೀನಿನಲ್ಲಿ ಬೆಳೆದಿದ್ದ ಸುಮಾರು೨ ಲಕ್ಷ ಮೌಲ್ಯದನೀಲಗಿರಿ ಮರಗಳನ್ನು ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿದ ಲಕ್ಷ್ಮಮ್ಮ ಕೋಂ ಲೇಟ್ ಕೃಷ್ಣಪ್ಪ ಇವರ ವಾರಸುದಾರರು ಮರಗಳನ್ನು ಕೂತಾಂಡಹಳ್ಳಿ ಮುನಿನಾರಾಯಣಪ್ಪ ಬಿನ್ ನರಸಿಂಹಪ್ಪ ಎಂಬುವವರಿಗೆ ಮಾರಾಟ ಮಾಡಿದ್ದಾರೆ.
ಸದರಿ ಮುನಿನಾರಾಯಣಪ್ಪ ಶಾಲಾಭಿವೃದ್ದಿ ಸಮಿತಿ ಅಥವಾ ಶಾಲೆಯ ಮುಖ್ಯಶಿಕ್ಷಕರ ಗಮನಕ್ಕೂ ತಾರದೇ ಶಾಲಾ ಜಾಗದಲ್ಲಿನ ಮರಗಳನ್ನು ಏಕಾಏಕಿ ಕಡಿದು ಸಾಗಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮರ ಕಡಿಯುವಾಗ ಶಾಲಾಭಿವೃದ್ದಿ ಸಮಿತಿ ಸದಸ್ಯರು ಹಾಗೂ ಮುಖ್ಯಶಿಕ್ಷಕರು ತಡೆಯಲು ಪ್ರಯತ್ನಿಸಿದ್ದು, ಅದಕ್ಕೆ ಜಗ್ಗದ ಮುನಿನಾರಾಯಣಪ್ಪನವರ ಕಡೆಯವರು ಇದು ನಮ್ಮ ಜಾಗವಾಗಿದ್ದು ಕೇಳುವವರು ನೀವ್ಯಾರು ಎಂದು ದಮಕಿ ಹಾಕಿ ಮರಗಳನ್ನು ಸಾಗಾಟ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಸದರಿ ಗೋಮಾಳ ಜಮೀನಿನ ಪಕ್ಕದಲ್ಲಿ ಅವರ ಜಮೀನಿದ್ದು, ಶಾಲೆಗೆ ಸೇರಿದ ೨೦ ಗುಂಟೆ ಜಮೀನು ಸಹಾ ನಮಗೆ ಸೇರುತ್ತದೆ ಎಂದು ಅತಿಕ್ರಮಣ ಮಾಡಿದ್ದು, ಇದರಿಂದ ಶೈಕ್ಷಣಿಕ ವಾತಾವರಣ ಹದೆಗೆಡುವಂತಾಗಿದ್ದು, ಸರ್ಕಾರಿ ಶಾಲೆಯ ಆಸ್ತಿಗೆ ಸರ್ಕಾರ ರಕ್ಷಣೆ ನೀಡದಿರುವುದು ವಿಪರ್ಯಾಸವಾಗಿದೆ, ಈ ಸಂಬಂಧ ಈಗಾಗಲೇ ಹಲವಾರು ವಿವಾದಗಳು ನಡೆದಿದ್ದು, ದಾರಿ ಬಿಟ್ಟುಕೊಡುವ ಕುರಿತು ಸಹಾ ಗ್ರಾಮ ಪಂಚಾಯಿತಿ ವತಿಯಿಂದ ಕ್ರಮವಹಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಇದೇ ಆರೋಪಿಗಳು ಶಾಲೆಯ ರಸ್ತೆಗೆ ಹೊಂದಿಕೊಂಡಂತೆ ಮನೆ ನಿರ್ಮಿಸಿ ದಾರಿಗೂ ಅಡ್ಡಿಪಡಿಸಿದ್ದು, ಸದರಿ ಮಾಹಿತಿಯನ್ನು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಮುಖ್ಯಶಿಕ್ಷಕರು ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸರ್ಕಾರಿ ಶಾಲೆಯ ಆಸ್ತಿಯನ್ನು ಸಂರಕ್ಷಿಸಿ, ಮರಕಡಿದು ಸಾಗಿಸಿರುವ ಆರೋಪಿಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಮಂಜುನಾಥ್, ನಾಗೇಶ್ವರರಾವ್, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಕುಮಾರ್ ಮತ್ತು ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.