ಆರ್ಮಸ್ಟ್ರಾಂಗ್ ಕೊಲೆ ಖಂಡಿಸಿ ಪ್ರತಿಭಟನೆ
ಬಂಗಾರಪೇಟೆ,೧೧: ತಮಿಳುನಾಡಿನ ಬಿಎಸ್‌ಪಿ ರಾಜ್ಯಾಧ್ಯಕ್ಷರಾದ ಆರ್ಮಸ್ಟ್ರಾಂಗ್ ಅವರ ಕೊಲೆಯನ್ನು ಖಂಡಿಸಿ ತಾಲ್ಲೂಕಿನ ಬಿಎಸ್‌ಪಿ ಮತ್ತು ವಿವಿಧ ಸಂಘಟನೆಗಳ ಮುಖಂಡರ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡು ಮಾತನಾಡಿದ ಕರ್ನಾಟಕ ದಲಿತ ರೈತಸೇನೆ ರಾಜ್ಯಾಧ್ಯಕ್ಷ ಹುಣಸನಹಳ್ಳಿ ಎನ್.ವೆಂಕಟೇಶ್ ಅವರು, ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಆರ್ಮಸ್ಟ್ರಾಂಗ್ ಅವರನ್ನು ಕೊಲೆ ಮಾಡಿರುವುದು ಈಡಿ ದೇಶವೇ ತಲೆತಗ್ಗಿಸುವಂತಹ ವಿಷಯವಾಗಿದೆ. ತಮಿಳುನಾಡಿನಲ್ಲಿ ಶೇ.೬೦ರಷ್ಟು ದಲಿತ ಜನಾಂಗ ಮಾಡುತ್ತಿದ್ದು, ಇಲ್ಲಿ ಸ್ಥಳೀಯ ಪಕ್ಷಗಳು ಪ್ರಭಲ್ಯವಾಗಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಪಕ್ಷವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿ, ಗೆಲುವನ್ನು ಸಾಧಿಸಿ, ವಿಧಾನಸಭೆಗೆ ಹೋಗುವ ನಿರೀಕ್ಷೆಯನ್ನು ಕಂಡ ಕೆಲವು ಕಿಡಿಗೇಡಿಗಳು ಆರ್ಮಸ್ಟ್ರಾಂಗ್ ಅವರನ್ನು ಕೊಲೆ ಮಾಡಿರುವುದಾಗಿ ಆರೋಪಿಸಿದರು.
ಈ ದೇಶದಲ್ಲಿ ದಲಿತರ ಏಳ್ಗೆಯನ್ನು ಸಹಿಸದೇ ಕೆಲವು ಮನುವಾದಿ ಮನಸ್ಥಿತಿಯವರು ದಲಿತರ ಕೊಲೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ದೌರ್ಜನ್ಯಗಳನ್ನು ಎಸಗುತ್ತಿದ್ದರೂ ಸಹ ಸಂಬಂಧಪಟ್ಟ ರಾಜ್ಯದ ಮತ್ತು ಕೇಂದ್ರದ ಗೃಹ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ಸಂವಿಧಾನದ ವಿರೋಧ ನೀತಿಯೇ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಗುರು ಸಂಸ್ಥೆ ಅಧ್ಯಕ್ಷೆ ಪ್ರಭಾವತಿ ಅವರು ಮಾತನಾಡಿ, ಈ ದೇಶದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ದಲಿತರ ಮೇಲೆ ರಾಜಕೀಯವನ್ನು ಮಾಡಿ ಆಸೆಯನ್ನು ಹುಟ್ಟಿಸಿ ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳು ಸಂಪೂರ್ಣವಾಗಿ ದಲಿತರನ್ನು ಕಡೆಗಣಿಸಿದೆ. ರಾಜ್ಯದಲ್ಲಿ ಸಾಹಿತಿಗಳು, ಚಿಂತಕರು, ಪ್ರಗತಿಪರ ಹೋರಾಟಗಾರರ ಮೇಲೆ ಹಲ್ಲೆಗಳು, ಕೊಲೆಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮೌನವಹಿಸಿರುವುದು ಕೆಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಂತಾಗಿದೆ.
ಮಿಳುನಾಡಿನ ಬಿಎಸ್‌ಪಿ ರಾಜ್ಯಾಧ್ಯಕ್ಷರಾದ ಆರ್ಮಸ್ಟ್ರಾಂಗ್ ಅವರು ಉತ್ತಮ ವಕೀಲ ವೃತ್ತಿಯನ್ನು ಅವಲಂಬಿಸಿ ಹಲವಾರು ವಕೀಲರನ್ನು ಹುಟ್ಟುಹಾಕಿ ತಮಿಳುನಾಡಿನಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವಲ್ಲಿ ಯಶಸ್ವಿ ಕಂಡವರನ್ನು ಪೊಲೀಸ್ ಠಾಣೆಯ ಸಮೀಪದಲ್ಲೇ ಅವರನ್ನು ಕೊಲೆ ಮಾಡಿರುವುದು ಖಂಡನೀಯ. ಇದನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಬಿಎಸ್‌ಪಿಯ ರಮಣ್‌ಕುಮಾರ್, ಶಂಕರ್, ನಕ್ಕನಹಳ್ಳಿ ವೆಂಕಟೇಶ್, ಮರಗಲ್ ಮುನಿಯಪ್ಪ, ಸೂಲಿಕುಂಟೆ ಪ್ರಕಾಶ್, ಚಿಕ್ಕಅಂಕಂಡಹಳ್ಳಿ ಅಶ್ವಥ್, ಶಾಂತಕುಮಾರಿ, ಎಂಜಲ್, ದೃತಿ, ಭವ್ಯ, ಕೀಲುಕೊಪ್ಪ ಮುನಿರಾಜ್, ಹಿರೇಕರಪನಹಳ್ಳಿ ಮುನಿರಾಜು, ಹುಳದೇನಹಳ್ಳಿ ವೆಂಕಟೇಶ್, ಅರವಿಂದ ಮಾರ, ಕೀಲುಕೊಪ್ಪ ಶ್ರೀನಿವಾಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.