ಮಕ್ಕಳು ಕಲಿಯುವಂತಹ ಬೋಧನ ವಿಧಾನ ಅಳವಡಿಸಿಕೊಳ್ಳಿ
ಕೋಲಾರ,ಜು,೧೧-ಮಕ್ಕಳಲ್ಲಿ ಧನಾತ್ಮಕ ಆಲೋಚನೆಗಳನ್ನು ಬಲಗೊಳಿಸುವ ಮೂಲಕ ಅವರಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಮೊದಲು ಶಿಕ್ಷಕರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಮತ್ತು ಬೋಧನೆಗೆ ಮಕ್ಕಳು ಆಕರ್ಷಿತರಾಗುವಂತೆ ಮಾಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಕರೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಮಂಗಳೂರಿನ ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್ ಹಾಗೂ ಗ್ರಾಮ ವಿಕಾಸ ಸೊಸೈಟಿ ವತಿಯಿಂದ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲೆಯ ಪ್ರೌಢಶಾಲೆಗಳ ಮುಖ್ಯಶಿಕ್ಷಕರು,ಗಣಿತ ಹಾಗೂವಿಜ್ಞಾನ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಧನಾತ್ಮಕ ಆಲೋಚನಾ ಶಕ್ತಿಯ ಮೂಲಕ ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸುವ ಕುರಿತಂತೆ ಎರಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಧನಾತ್ಮಕ ಆಲೋಚನೆ ತುಂಬಿ ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸುವ ಪ್ರಯತ್ನ ಹೇಗ ಮಾಡಬಹುದು ಎಂಬುದರ ಕುರಿತು ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್ ಪದಾಧಿಕಾರಿಗಳು ನೀಡುತ್ತಿರುವ ಮಾರ್ಗದರ್ಶನದ ಪ್ರಯೋಜನ ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಈ ಕಾರ್ಯಾಗಾರ ಆಯೋಜಿಸಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೂ ವ್ಯಕ್ತಿತ್ವ ವಿಕಸನ ಮತ್ತು ಸುಲಭ ಕಲಿಕಾ ವಿಧಾನಗಳ ಕುರಿತು ಅರಿವು ಮೂಡಿಸುವ ಕೆಲಸವನ್ನು ಟ್ರಸ್ಟ್ ಮಾಡಲಿದ್ದು, ಮೊದಲು ಶಿಕ್ಷಕರು ಸಿದ್ದರಾಗಬೇಕು ಎಂದರು.
ಶಿಕ್ಷಕರಲ್ಲಿ ಸಮಯಪ್ರಜ್ಞೆ ಅತ್ಯಗತ್ಯ ಎಂದು ತಾಕೀತು ಮಾಡಿದ ಅವರು, ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಲು ಈ ತರಬೇತಿ ವೇದಿಕೆಯಾಗಬೇಕು, ಇದು ಎಸ್ಸೆಸ್ಸೆಲ್ಸಿ ಫಲಿತಾಂಶ ಗುಣಾತ್ಮಕಗೊಳಿಸುವ ನಿಟ್ಟಿನಲ್ಲಿ ಸಹಕಾರಿಯಾಗಬೇಕು ಆಗ ಮಾತ್ರ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಶಿಕ್ಷಕರು ಬದಲಾವಣೆಯಾದರೆ ಇಡೀ ವ್ಯವಸ್ಥೆಯೇ ಬದಲಾವಣೆಯಾಗುತ್ತದೆ ಎಂಬ ಮಾತು ಸತ್ಯ, ಈ ನಿಟ್ಟಿನಲ್ಲಿ ಸಮಾಜ ಹಾಗೂ ದೇಶಕ್ಕೆ ಉತ್ತಮ ಸಾಧಕರನ್ನು ಕಳುಹಿಸಿಕೊಡುವ ಜವಾಬ್ದಾರಿ ನಿಮ್ಮ ಮೇಲಿದೆ, ನಿಮ್ಮ ಕಲಿಕಾ ನೀತಿ ಸಮಾಜದ ಮೇಲೂ ಪರಿಣಾಮ ಬೀರುತ್ತದೆ ಆದ್ದರಿಂದ ಹೊಣೆಯರಿತು ಕೆಲಸ ಮಾಡಿ ಎಂದು ಸೂಚಿಸಿದರು.
ಸೂಪತ್ ಬ್ರೈನ್ ಯೋಗ, ಬ್ರೈನ್ ಬ್ಯಾಲೆನ್ಸ್,ಕಟ್ ಕಟ್ ಮೆಥೆಡ್ ಮತ್ತಿತರ ಅಂಶಗಳನ್ನು ನೀವು ಅಳವಡಿಸಿಕೊಳ್ಳಿ, ಮಕ್ಕಳ ಮನಸ್ಥಿತಿ ಅರಿತು ಅವರಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಅಗತ್ಯವಾದ ರೀತಿಯಲ್ಲೇ ಬೋಧನಾ ಕ್ರಮ ಅಳವಡಿಸಿಕೊಳ್ಳಿ ಎಂದರು.
ಹಲವಾರು ಮನಸ್ಥಿತಿಗಳ ಮಕ್ಕಳು ಇರುತ್ತಾರೆ, ಕೆಲವು ಮಕ್ಕಳು ಆಸಕ್ತಿಯಿಂದ ಬೇಗ ಕಲಿಯುತ್ತಾರೆ ಕೆಲವು ಮಕ್ಕಳು ತುಂಟತನದಿಂದ ಇರುತ್ತಾರೆ ಅಂತಹ ಮಕ್ಕಳ ಮನಸ್ಥಿತಿಯನ್ನು ಶಿಕ್ಷಕರು ಹೇಗೆ ಅರಿಯಬೇಕು ಮತ್ತು ಅವರಲ್ಲಿ ಕಲಿಕಾಸಕ್ತಿ ಮೂಡಿಸಲು ಯಾವ ತಂತ್ರ ಅನುಸರಿಸಬೇಕು ಎಂಬುದನ್ನು ತರಬೇತಿಯಲ್ಲಿ ಕಲಿಸಿಕೊಡಲಾಗುತ್ತಿದೆ ಎಂದರು.
ಶಿಕ್ಷಣಾಧಿಕಾರಿ ಸಗೀರಾ ಅಂಜುಂ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್ ಮಾಧವ್ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಎನ್.ಕನ್ನಯ್ಯ, ಮುನಿವೆಂಕಟರಾಮಾಚಾರಿ, ಮುನಿಲಕ್ಷ್ಮಯ್ಯ,ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಗಾಯತ್ರಿ,ಶಶಿವಧನ, ವೆಂಕಟೇಶಬಾಬು, ಇಸಿಒ ಮುನಿರತ್ನಯ್ಯಶೆಟ್ಟಿ, ಸಿರಾಜುದ್ದೀನ್ ಮತ್ತಿತರರು ಉಪಸ್ಥಿತರಿದ್ದು, ಶಾರದಮ್ಮ ಸ್ವಾಗತಿಸಿ, ಕೃಷ್ಣಪ್ಪ ನಿರೂಪಿಸಿದರು.