ಕಲ್ಲುಗಣಿಗಾರಿಕೆಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿದ ಡಿ.ಸಿ
ಚಿಂಚೋಳಿ,ಸೆ.27- ತಾಲ್ಲೂಕಿನ ಮೀರಿಯಾಣ ಗ್ರಾಮದ ಹೊರವಲಯದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಪ್ರಾದೇಶಿಕ ಕಛೇರಿ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ಫೌಜಿಯ ತರನ್ನುಮ್ ಅವರು ತಾಲ್ಲೂಕಿನ ಮೀರಿಯಾಣ ಗ್ರಾಮದಲ್ಲಿ 2 ಶಹಬಾದ್ ಕಲ್ಲು ಕ್ವಾರಿ ಪ್ರಾರಂಭಿಸಲು ಅನುಮತಿಗಾಗಿ ಅರ್ಜಿಗಳನ್ನು ಸಲ್ಲಿಸಿದ್ದರ ಕುರಿತು ಪ್ರಸ್ತಾಪಿಸಿ ಹೊಸ ಗಣಿಗಾರಿಕೆ ಪ್ರಾರಂಭಿಸಲು ಸಾರ್ವಜನಿಕರಿಂದ ಅಭಿಪ್ರಾಯವನ್ನು ಸಂಗ್ರಹಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಫೌಜಿಯ ತರನ್ನುಮ್ ಅವರು, ಚಿಂಚೋಳಿ ತಾಲ್ಲೂಕು ವನ್ಯ ಜೀವಿಧಾಮವಾಗಿರುವುದರಿಂದ ಇಲ್ಲಿನ ಪ್ರಾಣಿ-ಪಕ್ಷಿಗಳಿಗೆ ಹಾಗೂ ವನ್ಯ ಜೀವಿಧಾಮದ ಮೇಲಾಗುವ ಪರಿಣಾಮ ಅನಾಹುತಗಳ ಕುರಿತು ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಹಿರಿಯ ಮುಖಂಡರಾದ ಗೋಪಾಲ್ ರಾವ ಕಟ್ಟಿಮನಿ ಸೇರಿದಂತೆ, ರವಿಶಂಕರ ರೆಡ್ಡಿ ಮುತ್ತಂಗಿ, ಅಬ್ದುಲ್ ಬಾಶಿದ್, ಮಾರುತಿ ಬಿ ಗಂಜಗಿರಿ ಸೇರಿದಂತೆ ಇನ್ನಿತರ ಸಾರ್ವಜನಿಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಾರ್ವಜನಿಕರಿಂದ ಅನೇಕ ಬಗೆಯ ಪರ ಮತ್ತು ವಿರೋಧದ ಭಿನ್ನಾಭಿಪ್ರಾಯಗಳು ಕಂಡು ಬಂದವು. ಈ ಸಭೆಯಲ್ಲಿ, ಪರಿಸರ ಇಲಾಖೆಯ ರೇಖಾ, ಸೇಡಂ ನ ಸಹಾಯಕ ಆಯುಕ್ತ ಪ್ರಭು ರೆಡ್ಡಿ, ಡಿ.ವೈ.ಎಸ್ಪಿ. ಸಂಗಮನಾಥ ಹಿರೇಮಠ ಸೇರಿದಂತೆ, ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಗ್ರೇಡ್ 2 ತಹಸೀಲ್ದಾರ್ ವೆಂಕಟೇಶ ದುಗ್ಗನ ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗಿಯಾಗಿದ್ದರು.