ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರ
ಕಲಬುರಗಿ,ಸೆ.27-ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಜಿಲ್ಲಾ ಘಟಕದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಎರಡನೇ ದಿನ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಯಿತು.
ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಸಿದ ಗ್ರಾಮ ಆಡಳಿತ ಅಧಿಕಾರಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೆಸಿಎಸ್‍ಆರ್ ನಿಯಮ 16ಎ ಅನ್ನು ಮರು ಸ್ಥಾಪಿಸುವಂತೆ, ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರದಲ್ಲಿ ಇದುವರೆಗೂ ಆಗಿರುವ ಅಮಾನತ್ತುಗಳನ್ನು ತಕ್ಷಣವೇ ರದ್ದು ಪಡಿಸುವಂತೆ ಹಾಗೂ ಅಂತರ ಜಿಲ್ಲಾ ಪತಿ-ಪತ್ನಿ ಪ್ರಕರಣಗಳ ವರ್ಗಾವಣೆಗೆ ಚಾಲನೆ ನೀಡಿ ಅಂತಿಮ ಆದೇಶಕ್ಕಾಗಿ ಬಾಕಿ ಇರುವ ಪ್ರಕರಣಗಳ ವರ್ಗಾವಣೆ ಆದೇಶ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಪ್ರತಿಭಟನಾನಿರತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸೈಯದ್ ಜುಬೇರ್ ಅಲಿ, ಕಾರ್ಯದರ್ಶಿ ಕುಮಾರ ಮೆಣಸಿನಕಾಯಿ, ಖಜಾಂಚಿ ರೇವಣಸಿದ್ದಪ್ಪ ಚಂದನಕೇರಿ, ಮಾಜಿ ಅಧ್ಯಕ್ಷ ಗುರುಮೂರ್ತಿ, ರಾಜ್ಯ ಸಂಘ ಸಂಚಾಲಕ ರಾಜು ಗೋಪಗೆ, ರಾಜ್ಯ ಸರಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಕೆ.ಕಿರಣಕುಮಾರ, ಸತೀಶ ಸಜ್ಜನ ಸೇರಿದಂತೆ ಅನೇಕರು ಪಾಲ್ಗೊಂಡರು.