ಇರಗಪಳ್ಳಿ; ಮುಲ್ಲಾಮರಿ ರಭಸಕ್ಕೆ ಬಂಡಿ ಸಮೇತ ಕೊಚ್ಚಿಹೋದ ಎತ್ತುಗಳು
ಚಿಂಚೋಳಿ,ಸೆ.27-ಮುಲ್ಲಾಮಾರಿ ಹಳ್ಳದ ನೀರಿನ ರಭಸಕ್ಕೆ ಬಂಡಿ ಸಮೇತ ಎತ್ತುಗಳು ಕೊಚ್ಚಿಕೊಂಡು ಹೋಗಿರುವ ಘಟನೆ ಸುಲೇಪೇಟ ಹೋಬಳಿ ಘಟಕದ ಇರಗಪಳ್ಳಿ ಗ್ರಾಮದಲ್ಲಿ ನಡೆದಿದೆ.
ಅಮೃತ ತಂದೆ ದೇವಪ್ಪ ಬೆಣ್ಣುರ ಎಂಬ ರೈತ ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ತನ್ನ ಹೊಲದಲ್ಲಿನ ಹತ್ತಿ ಬೆಳೆಗೆ ಕ್ರಿಮಿನಾಶಕವನ್ನು ಸಿಂಪಡಿಸಬೇಕೆಂದು ಗ್ರಾಮದ ಮುಲ್ಲಾಮರಿ ಹಳ್ಳಕ್ಕೆ ನೀರನ್ನು ತುಂಬಿಸಿಕೊಂಡು ಬರಲು ಎತ್ತುಗಳನ್ನು ಕಟ್ಟಿ ಬಂಡಿಯನ್ನು ಹೊಡೆದುಕೊಂಡು ಹೋಗಿದ್ದಾಗ ಹಳ್ಳದ ನೀರಿನ ರಭಸಕ್ಕೆ ಬಂಡಿ ಸಮೇತ ಎತ್ತುಗಳು ನೀರಿನಲ್ಲಿ ಹರಿದುಕೊಂಡು ಹೋಗಿ ಪಕ್ಕದ ಗ್ರಾಮ ಭೂರಪಳ್ಳಿ ಹಳ್ಳದಲ್ಲಿ ಕಲ್ಲಿಗೆ ತಾಗಿಕೊಂಡು ನಿಂತಿದ್ದನ್ನು ಜನರು ಗಮನಿಸಿ ಹಗ್ಗವನ್ನು ಕಟ್ಟಿ ಸಾವನ್ನಪ್ಪಿರುವ ಎತ್ತುಗಳನ್ನು ಹೊರ ತೆಗೆದಿದ್ದಾರೆ.
ಈ ಘಟನೆಯಲ್ಲಿ ರೈತ ಅಮೃತ ತಂದೆ ದೇವಪ್ಪ ಬೆಣ್ಣುರ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದು, ಸುಮಾರು 2 ಲಕ್ಷ ಮೌಲ್ಯದ ಎತ್ತುಗಳು ಮತ್ತು 50 ಸಾವಿರ ರೂಪಾಯಿ ಮೌಲ್ಯದ ಬಂಡಿ ಹಾಳಾಗಿದೆ ಎಂದು ತಿಳಿದು ಬಂದಿದೆ. ಇನ್ನು ಘಟನೆ ಕುರಿತು ಸುಲೇಪೇಟ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಂತಹ ಘಟನೆ ಜರುಗಿದ್ದಕ್ಕೆ ಗ್ರಾಮದ ರೈತರು ಕೃಷಿ ಕಾರ್ಮಿಕರು ಸಂತಾಪವನ್ನು ಸೂಚಿಸಿದ್ದಾರೆ.