ಗಂಗಾ ಕಲ್ಯಾಣ: 5692 ಪಂಪ್‍ಸೆಟ್‍ಗಳಿಗೆ ಜೆಸ್ಕಾಂ ವಿದ್ಯುತ್ ಸಂಪರ್ಕ
ಕಲಬುರಗಿ, ಸೆ.27: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಗಂಗಾ ಕಲ್ಯಾಣ ಯೋಜನೆಗೆ ಜೆಸ್ಕಾಂ ವ್ಯಾಪ್ತಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಉಚಿತವಾಗಿ ಕೊಳವೆ ಬಾವಿ,ತೆರೆದ ಬಾವಿ ನಿರ್ಮಾಣಕ್ಕೆ ಈ ಯೋಜನೆಯಡಿ ಧನ ಸಹಾಯ ನೀಡಲಾಗುತ್ತಿದ್ದು, ಪಂಪ್‍ಸೆಟ್‍ನ ವಿದ್ಯುದ್ದೀಕರಣಕ್ಕೆ ಸರಾಸರಿ 1.20 ರಿಂದ 2.5 ಲಕ್ಷ ರೂ. ವೆಚ್ಚವಾಗುತ್ತಿದೆ. 2022 ರಿಂದ 2024 ರ ಅವಧಿಯಲ್ಲಿ ಒಟ್ಟು 7,191 ಅರ್ಜಿಗಳ ಪೈಕಿ 5692 ಅರ್ಜಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಜೆಸ್ಕಾಂ ತಿಳಿಸಿದೆ.
2024-25 ರಲ್ಲಿ ಏಪ್ರಿಲ್‍ನಿಂದ ಆಗಸ್ಟ್‍ವರೆಗೆ 1924 ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಪ್ರಸ್ತುತ ಜೆಸ್ಕಾಂವತಿಯಿಂದ 1287 ಅರ್ಜಿಗಳು ಬಾಕಿ ಉಳಿದಿವೆ. 15 ವಿವಿಧ ಅಭಿವೃದ್ಧಿ ನಿಗಮಗಳು ಗಂಗಾ ಕಲ್ಯಾಣ ಯೋಜನೆ ಅಡಿ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ನೋಂದಣಿ ಮಾಡುತ್ತಾ ಯೋಜನೆ ಅನುಷ್ಠಾನ ಮಾಡುತ್ತಿವೆ. ಇವುಗಳ ವತಿಯಿಂದ 282 ಅರ್ಜಿಗಳು ಬಾಕಿ ಉಳಿದಿವೆ. ಜೊತೆಗೆ ಜೆಸ್ಕಾಂಗೆ ನೀಡಬೇಕಾಗಿರುವ ಮೊತ್ತದಲ್ಲಿ 29.66 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅತಿ ಹೆಚ್ಚು ಬಾಕಿ ಉಳಿಸಿಕೊಂಡಿದೆ ಎಂದು ಜೆಸ್ಕಾಂ ತಿಳಿಸಿದೆ.
ಗಂಗಾ ಕಲ್ಯಾಣ ಯೋಜನೆ ಅಡಿ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಕೊಳವೆಬಾವಿ ಕೊರೆಸಿ ಕೊಡಲಾಗುತ್ತಿದ್ದು, ರಾಜ್ಯದಲ್ಲಿಈ ಯೋಜನೆಗೆ ಅರ್ಹ ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಹೊಣೆ ಹೊತ್ತಿರುವ ಇಂಧನ ಇಲಾಖೆ, ಈ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದೆ.
ಕೆ.ಜೆ.ಜಾರ್ಜ್, ಇಂಧನ ಸಚಿವ
ಗಂಗಾಕಲ್ಯಾಣ ಯೋಜನೆಯ ಅಡಿ ಸಣ್ಣ ರೈತರಿಗೆ ಕೊಳವೆ ಬಾವಿ ಕೊರೆಸಲಾಗುತ್ತಿದ್ದು, ಇದಕ್ಕೆ ತಗುಲುವು ವಿದ್ಯುತ್ ಸಂಪರ್ಕವನ್ನು ಗ್ರಾಹಕರಿಗೆ ಉಚಿತವಾಗಿ ನೀಡಲಾಗುತ್ತಿದ್ದು, ಜೆಸ್ಕಾಂನ ಅರ್ಹ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು.
_ರವಿಂದ್ರ ಕರಲಿಂಗಣ್ಣವರ್, ವ್ಯವಸ್ಥಾಪಕ ನಿರ್ದೇಶಕ, ಜೆಸ್ಕಾಂ