ಸಾಂಸ್ಕøತಿಕ ಭವನ-ಹಾಸ್ಟೆಲ್ ನಿರ್ಮಾಣಕ್ಕೆನಿವೇಶನ ಮಂಜೂರು: ಮೋದಿ ಹರ್ಷ
ಕಲಬುರಗಿ,ಸೆ.27: ಶಹಾಪುರದ ಐಡಿಎಸ್‍ಎಂಟಿ ಬಡಾವಣೆಯಲ್ಲಿ ವೀರಶೈವ-ಲಿಂಗಾಯತ ಸಮಾಜದ ಸಾಂಸ್ಕೃತಿಕ ಭವನ ಹಾಗೂ ವಸತಿ ನಿಲಯ ನಿರ್ಮಾಣಕ್ಕಾಗಿ ಮಂಜೂರಾಗಿದ್ದ ನಿವೇಶನಕ್ಕೆ ರೂ.12 ಲಕ್ಷ ಮೌಲ್ಯ ನಿಗದಿಪಡಿಸಿ ಇತ್ತೀಚಿಗೆ ಕಲಬುರಗಿಯಲ್ಲಿ ನಡೆದ ಅಧಿವೇಶನದಲ್ಲಿ ಮಂಜೂರು ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ರಾಜ್ಯದ ಸಣ್ಣ ಕೈಗಾರಿಕಾ ಸಚಿವ ಹಾಗೂ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ರಾಷ್ಟ್ರೀಯ ಕಾರ್ಯಕಾರಿ ಸದಸ್ಯಶರಣಬಸಪ್ಪ ದರ್ಶನಾಪುರ ಪ್ರಾಮಾಣಿಕ ಶ್ರಮ ತಮಗೆ ಸಂತಸ ತಂದಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಹೇಳಿದ್ದಾರೆ.
ಕಳೆದ ವರ್ಷ ಸಮಾಜಕ್ಕೆ 3000 ಚದರ ಮೀಟರ್ ಅಳತೆಯ ನಿವೇಶನವನ್ನು ಐಡಿಎಎಂಟಿ ಸಮಿತಿಯಿಂದ ನಿವೇಶನ ಮೌಲ್ಯವನ್ನು ರೂ.99 ಲಕ್ಷಕ್ಕೆ ನಿಗದಿಪಡಿಸಿ ಮಂಜೂರು ಮಾಡಲಾಗಿತ್ತು. ಆದರೆ ಸಮಾಜದ ಸಾಂಸ್ಕೃತಿಕ ಭವನ ಹಾಗೂ ವಸತಿ ನಿಲಯ ನಿರ್ಮಾಣ ಮಾಡಲು ಇಷ್ಟೊಂದು ಹಣ ಭರಿಸುವುದು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಚಿವ ದರ್ಶನಾಪುರ ಅವರಿಗೆ ನಿವೇಶನ ಮೌಲ್ಯದಲ್ಲಿ ವಿನಾಯಿತಿ ದೊರಕಿಸಿಕೊಡಲು ಸರಕಾರದ ಮನವೊಲಿಸುವಂತೆ ಸಮಾಜದ ವತಿಯಿಂದ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಸಚಿವ ದರ್ಶನಾಪುರ, ಇತ್ತೀಚೆಗೆ ಕಲಬುರಗಿ ನಗರದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿವೇಶನದ ಮೌಲ್ಯ ರೂ.12 ಲಕ್ಷಕ್ಕೆ ನಿಗದಿಪಡಿಸಿ ಮಂಜೂರು ಮಾಡಿಸಿರುವುದು ಇಡೀ ಸಮಾಜಕ್ಕೆ ಹರ್ಷ ತಂದಿದೆ ಎಂದು ಮೋದಿ ತಿಳಿಸಿದ್ದಾರೆ.
ಇದೇವೇಳೆ, ಉದ್ದೇಶಿತ ನಿವೇಶನವನ್ನು ಸಮಾಜದ ಸದುದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಶರಣಕುಮಾರ ಮೋದಿ ಮನವಿ ಮಾಡಿದ್ದಾರೆ.