ಕಲ್ಯಾಣ ಕರ್ನಾಟಕ ಶೈಕ್ಷಣಿಕ ಗುಣಮಟ್ಟದ ಸುಧಾರಣ ಸಮಿತಿಗೆ ಗುರುರಾಜ್ ಕರ್ಜಗಿ ನೇತೃತ್ವ: ಎಡಪಂಥೀಯರ ವಿರೋಧ
ಕಲಬುರಗಿ:ಅ.05: ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಡಿಯಲ್ಲಿ ರಚಿಸಲಾಗಿದ್ದು, ಸಮಿತಿಯ ನೇತೃತ್ವವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯ ಗುರುರಾಜ್ ಕರ್ಜಗಿ ಅವರಿಗೆ ನೀಡಲಾಗಿದೆ ಎಂದು ಎಡಪಂಥೀಯರು ಆಕ್ರೋಶ ಹೊರಹಾಕಿದ್ದಾರೆ.
ಗುರುರಾಜ ಅವರಿಗೆ ಸಮಿತಿಯ ನೇತೃತ್ವ ನೀಡಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಸಾಕಷ್ಟು ಟೀಕೆ, ವಿರೋಧಗಳು ವ್ಯಕ್ತವಾಗುತ್ತಿವೆ. ಬಿಜೆಪಿ- ಆರೆಸ್ಸೆಸ್ ಸಿದ್ಧಾಂತವನ್ನು ಪ್ರತಿಪಾದಿಸುವ ಗುರುರಾಜ್ ಕರಜಗಿ ಅವರ ಆಯ್ಕೆಯು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕೆಂಗೆಣ್ಣಿಗೆ ಗುರಿಯಾಗಿರುವ ಸಂಶೋಧನಾ ವಿದ್ಯಾರ್ಥಿ ನಂದಕುಮಾರ್ ಪಿ., ಅವರು ಪ್ರತ್ರಿಕ್ರಿಯಿಸಿ, ಕೇವಲ ಭಾವನಾತ್ಮಕ ಮಾತುಗಳ ಮೂಲಕವೇ ಸಾಮಾನ್ಯ ಜನರನ್ನು ಮೂಡರನ್ನಾಗಿಸುವಲ್ಲಿ ನಿಸ್ಸಿಮರು. ಇಂತಹ ವ್ಯಕ್ತಿಯನ್ನು ಅದರಲ್ಲೂ ಮುಖ್ಯವಾಗಿ ಜಾತಿ ವಿನಾಶದ ಕ್ರಾಂತಿಯ ನೆಲವಾದ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಗುಣಮಟ್ಟದ ಸುಧಾರಣ ಸಮಿತಿಗೆ ಸರ್ಕಾರ ಮನುವಾದದ ಪ್ರತಿಪಾದಕರನ್ನು ನೇಮಿಸಿರುವುದು ಒಪ್ಪಲಾಗದು. ಸಮಿತಿಯಿಂದ ಕೈಬಿಡಬೇಕೆಂದು ಎಂದು ಆಗ್ರಹಿಸಿದ್ದಾರೆ.
ಗುರುರಾಜ್ ಕರ್ಜಗಿಯವರು ಸನಾತನ ಪ್ರತಿಪಾದಕ ಅವಕಾಶವಾದಿ ಹಾಗೂ ಸಂಘ ಪರಿವಾರದ ವ್ಯಕಿ ಎನ್ನುವುದು ಈಗಾಗಲೇ ನಾಡಿನ ಪ್ರಜ್ಞಾವಂತ ನಾಗರಿಕರಿಗೆ ತಿಳಿದಿದೆ. ಅವರು ಕೇಶವ ಕೃಪೆಯಿಂದ ಕರ್ನಾಟಕದ ವಿವಿಧೆಡೆ ಕಾರ್ಯಕ್ರಮಗಳು ಆಯೋಜನೆಗಳ ಮೂಲಕವೇ ಇವತ್ತು ಶಿಕ್ಷಣ ತಜ್ಞರಾದವರು. ಇತ್ತೀಚೆಗೆ ಕರ್ನಾಟಕ ಸರ್ಕಾರ ಕೈಗೊಳ್ಳುತ್ತೀರಿವ ಈ ರೀತಿಯ ನಿರ್ಧಾರ ಕಾರಣಕ್ಕೆ ಬಹುತೇಕರು ಕರ್ನಾಟಕ ಸರ್ಕಾರವನ್ನು ಅನುಮಾನದಿಂದ ಮತ್ತು ಅಸಹನೆಯಿಂದ ನೋಡುವಂತ ಪರಿಸ್ಥಿತಿ ಬಂದೊದಗಿದೆ. ಇದು ಈ ಸರ್ಕಾರದ ನೈತಿಕತೆ ಕುಸಿತವನ್ನು ಎತ್ತಿ ತೋರಿಸುವಂತೆ ಕಾಣುತ್ತಿದೆ. ಬಹಳ ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ರಾಜಕೀಯ ಚಿಂತನೆಯಲ್ಲೇ ಆಗಿರುವ ಬಹು ದೊಡ್ಡ ಲೋಪವನ್ನು ತೋರಿಸುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸಮಾಜದಲ್ಲಿ ಸೂಕ್ಷ್ಮ ಮತ್ತು ತೀಕ್ಷ್ಣವಾದ ರಾಜಕೀಯ ಪ್ರಜ್ಞೆಯನ್ನು ಬಿಟ್ಟು ಕೊಡುವುದು ಬಹು ಘೋರ ದುರಂತಕ್ಕೆಡೆ ಮಾಡಿಕೊಡುತ್ತದೆ ಎನ್ನುವುದು ಆಳುವ ಸರ್ಕಾರ ಅರಿತುಕೊಳ್ಳಬೇಕು. ವೈಚಾರಿಕ ತಿಳುವಳಿಕೆ, ಅನಿಕೇತನ ಪ್ರಜ್ಞೆಯ ನೀತಿಯನ್ನು ಹಾಗೂ ಕವಿರಾಜ ಮಾರ್ಗಕಾರ ಹಾಕಿರುವ ವಿವೇಕ ತತ್ವಕ್ಕೆ ಬುನಾದಿ ಹಾಕುವಂತ ಶಿಕ್ಷಣ ತಜ್ಞರನ್ನು ನೇಮಿಸಿದರೆ ಶೈಕ್ಷಣಿಕವಾಗಿ ಹಿಂದುಳಿದ ಹೈದ್ರಾಬಾದ್ ಕರ್ನಾಟಕ ನಿಜವಾಗಿಯೂ ಕಲ್ಯಾಣ ಕರ್ನಾಟಕವಾಗುವುದು ಎಂದು ಅವರು ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ಈಗಿರುವುದು ಹೆಸರಿಗೆ ಮಾತ್ರ ಕಲ್ಯಾಣ ಕರ್ನಾಟಕವಾಗಿದೆ ಅಷ್ಟೇ. ಹಾಗಾಗಿ ಶೈಕ್ಷಣಿಕ ಗುಣಮಟ್ಟದ ಸುಧಾರಣೆ ಸಮಿತಿಗೆ ನೇಮಕಗೊಂಡ ಗುರುರಾಜ್ ಕರ್ಜಿಗಿಯವರನ್ನು ಕೈಬಿಟ್ಟು, ರಾಜ್ಯದ ಹಿರಿಯ ಬುದ್ಧಿಜೀವಿಗಳ, ಸಾಹಿತಿಗಳ ಸಲಹೆಗಳನ್ನು ಪಡೆದು ಸಮಿತಿ ಸದಸ್ಯರನ್ನು ನೇಮಕ ಮಾಡುವುದು ಒಳಿತು ಎಂದು ಅವರು ತಿಳಿಸಿದ್ದಾರೆ.