ರೆಡ್‍ಕ್ರಾಸ್ ಸಂಸ್ಥೆಯ ತತ್ವಗಳನ್ನು ಪಾಲಿಸಿ: ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್
ಕಲಬುರಗಿ:ಅ.05: ಪ್ರತಿಯೊಬ್ಬ ವ್ಯಕ್ತಿ ರೆಡ್ ಕ್ರಾಸ್ ಸಂಸ್ಥೆಯ ತತ್ವಗಳನ್ನು ಪಾಲಿಸಿ ಮತ್ತು ಸಂಸ್ಥೆಯಿಂದ ಹಮ್ಮಿಕೊಂಡ ಕಾರ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷೆ ಫೌಜಿಯಾ ತರನ್ನುಮ್ ಅವರು ಹೇಳಿದರು.
ನಗರದ ಕನ್ಯಾ ಪ್ರೌಢಶಾಲೆಯಲ್ಲಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಿಂದ ಹಳ್ಳಿವರೆಗೂ ಇದರ ಬಗ್ಗೆ ಮಾಹಿತಿಯನ್ನು ಕೊಟ್ಟು ಒಂದು ಜೀವ ಉಳಿಸಿದರೆ ಈ ಸಂಸ್ಥೆ ಯಶಸ್ವಿಯಾಗುತ್ತದೆ ಹಾಗೂ ರೆಡ್ ಕ್ರಾಸ್ ಸಂಸ್ಥೆಯು ತನ್ನ ಕಾರ್ಯಗಳಿಂದ ಜೀವಪರ ಉದ್ದಾರಕ್ಕೆ ತೊಡಗಿದ್ದು ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷರಾಗಿರುವ ರಾಜ್ಯಪಾಲರಿಂದ ಸುಮಾರು ಪ್ರಥಮ ಬಹುಮಾನ ಪಡೆದು ರಾಜ್ಯದಲ್ಲಿಯೇ ತನ್ನ ಛಾಪನ್ನು ಮೂಡಿಸಿದೆ. ಹಾಗಾಗಿ ಇನ್ನು ಹೆಚ್ಚು ಕೆಲಸ ಮಾಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸೂರ್ಯಕಾಂತ್ ಮದಾನೆ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಎಸ್.ಪಿ. ಸುಳ್ಳದ್ ಅವರು ಮಾತನಾಡಿ, ಮುಂಬರುವ ದಿನಗಳಲ್ಲಿ ಜ್ಯೂನಿಯರ್ ರೆಡ್ ಕ್ರಾಸ್ ಬಗ್ಗೆ ಹೆಚ್ಚಿನ ಆದ್ಯತೆ ಕೊಟ್ಟು ಈ ಸಂಸ್ಥೆಯನ್ನು ಪ್ರತಿಯೊಂದು ಶಾಲಾ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಆ ಬಗ್ಗೆ ಹೆಚ್ಚಿನ ಆದ್ಯತೆ ಕೊಟ್ಟು ಇದರ ಸದುಪಯೋಗ ಪಡೆದುಕೊಳ್ಳಲು ಕರೆ ಕೊಟ್ಟರು.
ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್ ಇತಿಹಾಸ ಮತ್ತು ಉದ್ದೇಶ ಕುರಿತು ಡಾ. ಶರಭಪ್ಪ ಸೈದಾಪೂರ್, ಕಿರಿಯ ರೆಡ್ ಕ್ರಾಸ್ ಕಾರ್ಯ ಚಟುವಟಿಕೆಗಳ ಕುರಿತು ಜಯಪ್ರಕಾಶ್ ಕಟ್ಟಿಮನಿ, ಪ್ರಥಮ ಚಿಕ್ಸಿತೆ ಬಗ್ಗೆ ಡಾ. ಮಲ್ಹಾರಾವ್ ಮಲ್ಲೆ, ಪರಿಸರ ಸಂರಕ್ಷಣೆ ಬಗ್ಗೆ ಮಾನು ಸಗರ್, ರಾಷ್ಟ್ರ ಧ್ವಜ, ರಾಷ್ಟ್ರಗೀತೆ ದಶಾಭಿಮಾನದ ಬಗ್ಗೆ ಡಾ. ಶಿವಲಿಂಗಪ್ಪ ಗೌಳಿ ಮತ್ತು ಸಂಚಾರ ನಿಯಮಗಳು, ರಸ್ತೆ ಸುರಕ್ಷತೆ ಕುರಿತು ಸಂಚಾರ ಪೆÇೀಲಿಸ್ ಇನ್ಸಪೆಕ್ಟರ್ ರಾಜಕುಮಾರ್ ಕೊಬಾಳ್ ಅವರು ವಿಶೇಷ ತರಬೇತಿ ನೀಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಅರುಣಕುಮಾರ್ ಲೋಯಾ ಅವರು ಅಧ್ಯಕ್ಷತೆ ವಹಿಸಿದ್ದರು. ಉಪ ಸಭಾಪತಿ ಭಾಗ್ಯಲಕ್ಷ್ಮೀ ಎಂ, ಖಜಾಂಚಿ ಜಿ.ಎಸ್. ಪದ್ಮಾಜಿ,ವಿಜಯಕುಮಾರ್ ವಿ. ಬೆಳಮಗಿ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಶಾಲೆಯ ಜ್ಯೂನಿಯರ್ ರೆಡ್ ಕ್ರಾಸ್ ಕೌನ್ಸಿಲರ್ ಗುರುಲಿಂಗಯ್ಯ ಮಠ್, ವಿಶ್ವನಾಥ್ ಕೋರವಾರ್, ಡಾ. ಎಸ್.ಎಸ್. ಹತ್ತಿ ಮುಂತಾದವರು ಪಾಲ್ಗೊಂಡಿದ್ದರು.