ಕನ್ನಡದ ಅಸ್ಮಿತೆ ಸಾರಿದ ಗೋಕಾಕ ಚಳುವಳಿ
ಕಲಬುರಗಿ:ಅ.05: ರಾಜ್ಯದಲ್ಲಿ ಹಿಂದೆಂದು ಕಾಣದ ಬೃಹತ ಪ್ರಮಾಣದಲ್ಲಿ ಜನರು ಸೇರಿರುವ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದು ದಕ್ಷಣ ಭಾರತದಲ್ಲಿ ಪ್ರಥಮ ಬಾರಿಗೆ ಜರುಗಿದ ಗೋಕಾಕ ಚಳುವಳಿ ಒಂದು ಐತಿಹಾಸಿಕ, ಅವಿಸ್ಮರಣೀಯವಾಗಿದ್ದು, ಇದು ಕನ್ನಡದ ಅಸ್ಮಿತೆಯನ್ನು ಸಾರಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ಗೋಕಾಕ ಚಳುವಳಿಯೆ 40ನೇ ವರ್ಷಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕನ್ನಡಕ್ಕಾಗಿ ಸಾಹಿತಿಗಳು, ಬುದ್ದಿಜೀವಿಗಳು, ಜನಸಾಮಾನ್ಯರೆಲ್ಲರು ಚಳುವಳಿಯಲ್ಲಿ ಭಾಗವಹಿಸುವ ಮೂಲಕ ಕನ್ನಡ ಪ್ರೇಮ ಮೆರೆಯಲಾಯಿತು. ಇದು ಕನ್ನಡ ಭಾಷೆಯ ಹಕ್ಕಿನ ಚಳುವಳಿ. ಕನ್ನಡವನ್ನು ಸಂರಕ್ಷಿಸುವಲ್ಲಿ ನಿರ್ಣಾಯಕವಾಗಿದೆ. ಮೇರು ಸಾಹಿತಿ ಡಾ.ವಿ.ಕೃ.ಗೋಕಾಕ, ವರನಟ ಡಾ.ರಾಜಕುಮಾರ, ಜಿ.ನಾರಾಯಣ ಕುಮಾರ್ ಅವರ ಪಾತ್ರ ಪ್ರಮುಖವಾಗಿದೆ ಎಂದು ಚಳುವಳಿಯ ಹಿನ್ನಲೆ, ಕೊಡುಗೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕಿಯರಾದ ಪ್ರಿಯಾಂಕಾ ಉಜಳಂಬಿ, ನಿಲೊಫರ್ ಶೇಖ್, ಪೂಜಾ ಜಮಾದಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.