ನಾಲ್ಕು ಕಾರ್ಮಿಕ ಕಾಯ್ದೆಗಳ ವಿರುದ್ಧ ಸಿಐಟಿಯು ಪ್ರತಿಭಟನೆ
ಕಲಬುರಗಿ:ಜು.10:ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯುವಂತೆ ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಒಂದು ದಿನದ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಗೆ ಮನವಿ ಪತ್ರ ಸಲ್ಲಿಸಿ, ಭಾರತದಲ್ಲಿ ಮೋದಿ ಸರ್ಕಾರದ ನೀತಿಗಳು ಕೇವಲ ಕಾರ್ಮಿಕರಿಗಾಗಿ ಅಲ್ಲ. ರೈತರು ಮತ್ತು ಇತರೆ ಶೋಷಿತ ವರ್ಗಗಳಿಗೆ ಮತ್ತು ದೇಶಕ್ಕೆ ದಮನಕಾರಿ ಎಂದು ಕಳವಳ ವ್ಯಕ್ತಪಡಿಸಿದರು.
ಶಿಕ್ಷಿತ ಯುವಜನರ ನಡುವೆ ನಿರುದ್ಯೋಗವು ಹಿಂದೆಂದೂ ಕಾಣದಷ್ಟು ಹೆಚ್ಚಿನ ಪ್ರಮಾಣದಲ್ಲಿ ಮುಟ್ಟಿದ. ಲಕ್ಷಾಂತರ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಬಾಗಿಲು ಮುಚ್ಚಿವೆ. ಕೋಟ್ಯಾಂತರ ಉದ್ಯೋಗಗಳು ನಷ್ಟವಾಗಿವೆ. ಕಾರ್ಮಿಕರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಉದ್ಯೋಗಗಳು ತೀವ್ರತರವಾಗಿ ಕುಂಠಿತಗೊಂಡಿವೆ. ಗುತ್ತಿಗೆ, ತಾತ್ಕಾಲಿಕ, ನಿಶ್ಚಿತ ಅವಧಿ, ಪಾರ್ಟ್‍ಟೈಮ್, ಗಿಗ್ ಕಾರ್ಮಿಕರು ಮತ್ತು ಇಂತಹುದೇ ಕಾರ್ಮಿಕರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ ಎಂದು ಅವರು ಆತಂಕ ಹೊರಹಾಕಿದರು.
ಕಳೆದ ತಿಂಗಳು ಜರುಗಿದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 303ರಿಂದ 240 ಸ್ಥಾನಗಳಿಗೆ ಕುಸಿದಿದೆ. ಅದೂ ಅಯೋಧ್ಯೆಯಲ್ಲಿ ಸೋಲುವ ಮೂಲಕ ಮುಖಭಂಗಗೊಂಡಿದೆ. ಇದರಿಂದಾಗಿ ಕೋಮುವಾದಿ ರಾಜಕೀಯ ಪಕ್ಷಕ್ಕೆ ತೀವ್ರತರ ಹಿನ್ನಡೆಯಾಗಿದೆ. ಚುನಾವಣೆಯ ನಂತರ ಅದಕ್ಕೆ ಬಹುಮತ ಬಾರದ ಇದ್ದರೂ ಕೆಲ ಪಕ್ಷಗಳ ಬೆಂಬಲದಿಂದ ಒಂದು ಬಲಹೀನ ಸರ್ಕಾರ ರಚಿಸಿದೆ ಎಂದು ಅವರು ಟೀಕಿಸಿದರು.
ಎಲ್ಲ ರೀತಿಯ ಖಾಸಗೀಕರಣವನ್ನು ನಿಲ್ಲಿಸಿ ಎನ್‍ಎಂಪಿ ರದ್ದುಪಡಿಸುವಂತೆ, ಎಲ್ಲ ಕಾರ್ಮಿಕರಿಗೆ ಮಾಸಿಕ 26000ರೂ.ಗಳ ಕನಿಷ್ಠ ವೇತನ ಜಾರಿಗೊಳಿಸುವಂತೆ, ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ಭದ್ರತೆಯನ್ನು ಖಾತ್ರಿಪಡಿಸಿ ಸಮಾನ ವೇತನ ಮತ್ತು ಸೌಲಭ್ಯಗಳನ್ನು ಒದಗಿಸುವಂತೆ, ಅಗ್ನಿವೀರ್, ಆಯುಧವೀರ್, ವೈಲ್‍ವೀರ್ ಅವೈಜ್ಞಾನಿಕ ನೇಮಕಾತಿಗಳನ್ನು ರದ್ದುಪಡಿಸಿ ಇತರೆ ಸ್ಥಿರ ಉದ್ಯೋಗಗಳನ್ನು ಮುಂದುವರೆಸುವಂತೆ, ಎಲ್ಲ ಅಸಂಘಟಿತ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಿ ಇಪಿಎಫ್, ಇಪಿಎಸ್, ಇಡಿಎಲ್‍ಐ ಬಾಕಿಗಳನ್ನು ನೀಡದಿರುವ ಉದ್ಯೋಗದಾತನ ಮೇಲಿನ ಶುಲ್ಕವನ್ನು ಕಡಿಮೆ ಮಾಡುವ ಅಧಿಸೂಚನೆಗಳನ್ನು ರದ್ದುಗೊಳಿಸುವಂತೆ ಅವರು ಒತ್ತಾಯಿಸಿದರು.
ಎನ್‍ಪಿಎಸ್ ನಿಲ್ಲಿಸಿ, ಓಪಿಎಸ್ ಮರು ಸ್ಥಾಪಿಸುವಂತೆ, ಇಪಿಎಸ್ ಪಿಂಚಣಿದಾರರಿಗೆ ಕನಿಷ್ಠ 9000ರೂ.ಗಳ ಪಿಂಚಣಿಯನ್ನು ಖಚಿತಪಡಿಸುವಂತೆ, ಅಂಗನವಾಡಿ ಬಿಸಿಯೂಟ, ಆಶಾ ಮುಂತಾದ ಸ್ಕೀಮ್ ನೌಕರರನ್ನು ಖಾಯಂಗೊಳಿಸುವಂತೆ, ಕಾರ್ಮಿಕ ಕಾಯ್ದೆಗಳಿಂದ ಐಟಿ ಮತ್ತು ತೆರಿಗೆ ವಿನಾಯಿತಿ ನೀಡುವ ಅಧಿಸೂಚನೆಗಳನ್ನು ರದ್ದುಗೊಳಿಸುವಂತೆ, ಕೆಲಸದ ಸಮಯವನ್ನು ಹೆಚ್ಚಿಸಲು ಶಾಸನಬದ್ಧ ತಿದ್ದುಪಡಿಗಳನ್ನು ರದ್ದುಗೊಳಿಸುವಂತೆ ಅವರು ಆಗ್ರಹಿಸಿದರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಬಿ. ಸಜ್ಜನ್, ಶಾಂತಾ ಘಂಟೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಗಯ್ಯಸ್ವಾಮಿ, ಗೌರಮ್ಮ ಪಾಟೀಲ್, ರಾಜಮತಿ ಪಾಟೀಲ್, ವಿಜಯಲಕ್ಷ್ಮೀ, ಅಯ್ಯಪ್ಪ, ಬಾಬು ಹೂವಿನಹಳ್ಳಿ, ಸಂಗೀತಾ ಗುತ್ತೇದಾರ್, ಶ್ರೀಮಂತ್ ಬಿರಾದಾರ್ ಸೇರಿದಂತೆ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.