ರೈತರ, ಕೃಷಿ ಕೂಲಿಕಾರರ ರಕ್ಷಣೆಗಾಗಿ ಕೇರಳ್ ಮಾದರಿಯಲ್ಲಿ ಋಣಮುಕ್ತ ಕಾಯ್ದೆ ಜಾರಿಗೆ ಆಗ್ರಹ
ಕಲಬುರಗಿ:ಜು.10:ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೊಲೆಗಡುಕ ನೀತಿಗಳಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಕೂಡಲೇ ರೈತರ ಹಾಗೂ ಕೃಷಿ ಕಾರ್ಮಿಕರ ರಕ್ಷಣೆಗಾಗಿ ಕೇರಳ್ ಮಾದರಿಯಲ್ಲಿ ಋಣಮುಕ್ತ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು. ಬಸವರಾಜ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಕಳೆದ 15 ತಿಂಗಳಲ್ಲಿ ಸುಮಾರು 1200 ರೈತರು ಹಾಗು ಕೂಲಿಕಾರರು ಮತ್ತು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ವರದಿ ಬಹಿರಂಗ ಗೊಂಡಿದೆ. ಇದೊಂದು ತೀವ್ರ ಆಘಾತಕಾರಿ ವಿಷಯವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಈ ಕುಟುಂಬಗಳಿಗೆ ಪರಿಹಾರ ಸಿಕ್ಕಿದೆಯಾ ಇಲ್ಲವಾ ಎಂದು ಪರಿಶೀಲಿಸಿದರೆ ಸಾಕೇ? ಆತ್ಮಹತ್ಯೆ ತಡೆಯುವ ಗಂಭೀರ ಕ್ರಮ.ಗಳು ಬೇಡವೇ? ಎಂದು ಪ್ರಶ್ನಿಸಿದ ಅವರು, ರಾಜ್ಯ ಹಾಗೂ ದೇಶದಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳಿಗೆ ಒಕ್ಕೂಟ ಹಾಗು ರಾಜ್ಯ ಸರ್ಕಾರಗಳೆ ನೇರ ಹೊಣೆಯಾಗಿವೆ ಎಂದು ದೂರಿದರು.
ದೇಶ ಹಾಗೂ ರಾಜ್ಯದಲ್ಲಿ ಕೃಷಿ ಹಾಗು ಕೃಷಿ ಭೂಮಿಯನ್ನು ಕಾಪೆರ್Çೀರೇಟ್ ಕಂಪೆನಿಗಳಿಗೆ ವಹಿಸಿಕೊಡುವ ಈ ಸರ್ಕಾರಗಳ ನೀಚ ದುಷ್ಕೃತ್ಯದ ಭಾಗವಾಗಿವೆ. ಆದ್ದರಿಂದ ಇವು ರೈತರ ಆತ್ಮಹತ್ಯೆಗಳಲ್ಲ ಬದಲಿಗೆ ಇವು ಈ ಸರ್ಕಾರಗಳು ನಡೆಸಿರುವ ಕಗ್ಗೊಲೆಗಳಾಗಿವೆ ಎಂದು ಅವರು ಕಿಡಿಕಾರಿದರು.
ಇಂತಹ ಕಗ್ಗೊಲೆಗಳಿಗೆ ಕಾರಣವಾದ ಲೂಟಿಕೋರ ಕಾಪೆರ್Çೀರೇಟ್ ಕಂಪೆನಿಗಳ ಪರವಾದ ರೈತ ಹಾಗು ದೇಶ ವಿರೋದಿ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ನೀತಿಗಳನ್ನು ಜಾರಿಗೊಳಿಸಿದ ಒಕ್ಕೂಟ ಹಾಗೂ ಕರ್ನಾಟಕ ಸರ್ಕಾರಗಳ ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಇಂತಹ ಕೊಲೆಗಡುಕ ನೀತಿಗಳನ್ನು ಬೆಂಬಲಿಸುತ್ತಿರುವ ಬಿಜಿಪಿ ಹಾಗೂ ಕಾಂಗ್ರೆಸ್ ಪಕ್ಷಗಳು ನೇರ ಹೊಣಿಗಾರರಾಗಿದ್ದಾರೆ ಎಂದು ಅವರು ಎಚ್ಚರಿಸಿದರು.
ಕಳೆದ ಅವಧಿಯ ಬರಗಾಲದ ಸಂದರ್ಭದಲ್ಲಿ ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಖಾಸಗಿ ಮತ್ತು ಮೈಕ್ರೋ ಫೈನಾನ್ಸ ಸಂಸ್ಥೆಗಳದ್ದೂ ಸೇರಿ ಎಲ್ಲ ಸಾಲ ಮನ್ನಾ ಮಾಡಲು ಕ್ರಮವಹಿಸಿ ಮತ್ತು ಸಾಲ ನೀಡಿದವರ ಒತ್ತಡದ ಮೇಲೆ ಗಂಭೀರ ಕ್ರಮ ವಹಿಸಿದ್ದರೆ ಈ ರೈತರ ಹಾಗು ರೈತ ಮಹಿಳೆಯರ ಈ ಬಲವಂತದ ಸಾಲುಗಳನ್ನು ತಡೆದು ಆ ಕುಟುಂಬಗಳು ಅನಾಥವಾಗುವುದನ್ನು ತಡೆಯಬಹುದಿತ್ತು, ಆದರೆ ಕಾಪೆರ್Çೀರೇಟ್ ಸಂಸ್ಥೆಗಳಿಗೆ ಮಾಡಿಕೊಂಡವರಿಗೆ ಅನ್ನದಾತರನ್ನು ರಕ್ಷಿಸುವ ಇರಾದೆ ಇಲ್ಲವಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಸಂಸತ್ತಿನಲ್ಲಿ ಮತ್ತು ವಿಧಾನಸಭೆಯಲ್ಲಿ ಗಂಭೀರ ಧ್ವನಿ ಎತ್ತಿ ರೈತರ ರಕ್ಷಣಿಗೆ ಧಾವಿಸದಿರುವ ರಾಜ್ಯದ ಎಲ್ಲ ಸಂಸದರು ಹಾಗು ಶಾಸಕರ ನಡೆಯು ಹೊಣಿಗೇಡಿತನದ್ದಾಗಿದೆ ಮತ್ತು ನಾಚಿಕೆಗೇಡಿನದ್ದಾಗಿದೆ. ಕೆಲವೇ ನೂರು ಕಾಪೆರ್Çೀರೇಟ್ ಕಂಪೆನಿಗಳ ಸುಮಾರು 35 ಲಕ್ಷ ಕೋಟಿ ರೂಗಳ ಸಾಲ ಮನ್ನಾ ಮಾಡುವ ಒಕ್ಕೂಟ ಸರ್ಕಾರ ನಿಜ ರೈತರ ಸಾಲವನ್ನು ಯಾಕೆ ಮನ್ನಾ ಮಾಡಬಾರದು. ದೊಡ್ಡ ಕೈಗಾರಿಕೋದ್ಯಮಿಗಳಿಗೆ ಕೈಗಾರಿಕೆ ನಿರ್ಮಾಣಕ್ಕೆ ಲಕ್ಷಾಂತರ ಕೋಟಿ ರೂ.ಗಳ ಸಹಾಯಧನ ಮತ್ತು ಬಡ್ಡಿರಹಿತ ಸಾರ್ವ ಜನಿಕ ಸಾಲ ಒದಗಿಸುವ ರಾಜ್ಯ ಸರ್ಕಾರ ಅವರ ಜೊತೆ ನಿಲ್ಲಬೇಕು ಎಂದು ಅವರು ಒತ್ತಾಯಿಸಿದರು.
ರೈತರು, ಗೇಣಿದಾರರು ಮತ್ತು ಕೃಷಿ ಕೂಲಿಕಾರರು ಹಾಗು ಸ್ತ್ರೀಶಕ್ತಿ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದ ಮಹಿಳೆಯರನ್ನು ರಕ್ಷಿಸಲು ದೇಶ ಮತ್ತು ರಾಜ್ಯದಲ್ಲಿ ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳೆರಡೂ ಕೇರಳ್ ಸರ್ಕಾರದ ಮಾದರಿಯ ಋಣ ಮುಕ್ತ ಕಾಯ್ದೆ ಜಾರಿಗೆ ತರುವಂತೆ, ರೈತರ ಬೆಳೆಗೆ ಡಾ. ಎಂ.ಎಸ್. ಸ್ವಾಮಿನಾಥನ್ ಕೃಷಿ ಆಯೋಗದ ಸಲಹೆಯಂತೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾಯ್ದೆ ಜಾರಿಗೊಳಿಸುವಂತೆ, ಅದೇ ರೀತಿ, ಉದ್ಯೋಗ ಖಾತ್ರಿ ದಿನಗೂಲಿಯನ್ನು 750ರೂ.ಗಳಿಗೆ ಹೆಚ್ಚಿಸುವಂತೆ ಹಾಗೂ ಕೆಲಸವನ್ನು 200 ದಿನಗಳಿಗೆ ಮತ್ತು ನಗರ ಪ್ರದೇಶಗಳಿಗೆ ವಿಸ್ತರಿಸುವಂತೆ ಅವರು ಆಗ್ರಹಿಸಿದರು.
ಈಗಾಗಲೇ ಪ್ರಾಣ ಕಳೆದುಕೊಂಡ ಕುಟುಂಬಗಳ ಎಲ್ಲ ಸಾಲ ಸರ್ಕಾರ ವಹಿಸಿಕೊಳ್ಳುವಂತೆ ಮತ್ತು ತಲಾ 25 ಲಕ್ಷ ರೂ.ಗಳ ಪರಿಹಾರ ನೀಡುವಂತೆ, ಈ ಕುರಿತು ಅಗತ್ಯ ಕ್ರಮ ವಹಿಸುವಂತೆ ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಡಾ. ಸಾಯಿಬಣ್ಣ ಗುಡುಬಾ, ಪ್ರಭು ಪ್ಯಾರಬದ್ದಿ ಅವರು ಉಪಸ್ಥಿತರಿದ್ದರು.