ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಂಡ ಉಚಿತ ನೇತ್ರತಪಾಸಣಾ ಶಿಬಿರದಲ್ಲಿ ಒಟ್ಟು 390 ಜನರ ನೇತ್ರ ತಪಾಸಣೆ
ಕಲಬುರಗಿ:ಜು.10:ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೇಂದ್ರ ಕಾರಾಗೃಹ ಇವುಗಳ ಸಹಯೋಗದೊಂದಿಗೆ ಕಾರಾಗೃಹದ ಬಂದಿ ನಿವಾಸಿಗಳಿಗೆ ಮತ್ತು ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳಿಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಬುಧವಾರ ಹಮ್ಮಿಕೊಳ್ಳಲಾಯಿತು.
ಈ ಶಿಬಿರದಲ್ಲಿ ಕೇಂದ್ರ ಕಾರಾಗೃಹದ 350 ಬಂದಿಗಳು ಮತ್ತು ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 40 ಅಧಿಕಾರಿ/ಸಿಬ್ಬಂದಿಗಳು ಸೇರಿದಂತೆ ಒಟ್ಟು 390 ಜನರ ನೇತ್ರ ತಪಾಸಣೆಯನ್ನು ನಡೆಸಲಾಯಿತು. ಇದರಲ್ಲಿ 127 ಜನ ಬಂದಿಗಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು ಹಾಗೂ 8 ಜನ ಬಂದಿಗಳಿಗೆ ನೇತ್ರ ಶಸ್ತ್ರ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ|| ಅಬ್ದುಲ್ ಅಜೀಜ್, ಡಾ|| ಮುಸ್ತಾಫಾ ಹಾಗೂ ಆರೋಗ್ಯ ಇಲಾಖೆಯ ಕಣ್ಣಿನ ತಪಾಸಣೆ ತಂಡದಿಂದ ಶಿಬಿರವನ್ನು ನಡೆಸಿದರು.
ಈ ಸಂದರ್ಭದಲ್ಲಿ ಕೇಂದ್ರ ಕಾರಾಗೃಹದ ಪ್ರಭಾರಿ ಮುಖ್ಯ ಅಧೀಕ್ಷಕರಾದ ಬಿ. ಸುರೇಶ್, ಸಹಾಯಕ ಅಧೀಕ್ಷಕರಾದ ಹುಸೇನಿ ಪೀರ್, ಡಾ|| ಅರ್ಚನಾ, ಡಾ|| ಆನಂದ ಅಡಕಿ, ಶಿಕ್ಷಕ ನಾಗರಾಜ ಮುಲಗೆ, ಜೈಲರ್‍ಗಳಾದ ಸುನಂದ ವಿ., ಸೈನಾಜ್ ಎಂ. ನಿಗೇವಾನ್, ಸಾಗರ್ ಪಾಟೀಲ್ ಹಾಗೂ ಕಾರಾಗೃಹ ಆಸ್ಪತ್ರೆ ವಿಭಾಗದ ಹಾಗೂ ಕಾರಾಗೃಹ ಸಿಬ್ಬಂದಿಗಳು ಉಪಸ್ಥಿತರಿದ್ದರು.