ಅತ್ತೆ ಮಗಳ ಪ್ರೀತಿಸಿದ ಅಳಿಯನ ಕೊಲೆ:ಇಬ್ಬರ ಬಂಧನ
ಕಲಬುರಗಿ,ಜು.10-ಸೋದರತ್ತೆ ಮಗಳನ್ನು ಪ್ರೀತಿಸಿದ ಅಳಿಯನನ್ನು ಮಾರಕಾಸ್ತ್ರಗಳಿಂದ ಹೊಡೆದು ಭೀಕರವಾಗಿ ಕೊಲೆಗೈದಿರುವ ಘಟನೆ ನಗರ ಹೊರವಲಯದ ಶಹಾಬಾದ್ ರಸ್ತೆಯ ಧಾಬಾ ಒಂದರ ಹತ್ತಿರ ನಡೆದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ನಗರದ ಓಝಾ ಲೇಔಟ್‍ನ ಪ್ರವೀಣ್ ಶಿವಪ್ಪ ಬಿರಾದಾರ (18) ಕೊಲೆಯಾದ ಯುವಕ.
ಪ್ರವೀಣ್ ತನ್ನ ಸೋದರತ್ತೆ (ತಂದೆಯ ತಂಗಿ) ನೀಲಮ್ಮ ಅವರ ಮಗಳನ್ನು ಪ್ರೀತಿಸಿದ್ದ. ಅವಳು ಸಹ ಪ್ರವೀಣ್‍ನನ್ನು ಪ್ರೀತಿಸುತ್ತಿದ್ದುದ್ದರಿಂದ ಮದುವೆಯಾಗಲು ನಿರ್ಧರಿಸಿದ್ದರು. ಈ ವಿಷಯ ನೀಲಮ್ಮ ಪತಿ ಶ್ರೀಶೈಲ ತೆಗ್ಗಿನಮನಿಗೆ ಗೊತ್ತಾಗಿ ತಮ್ಮ ಮಗಳ ತಂಟೆಗೆ ಬಂದರೆ ಕೊಲೆ ಮಾಡಿಸುವುದಾಗಿ ಜೀವ ಬೆದರಿಕೆ ಹಾಕಿದ್ದರು. ಇಷ್ಟಾಗಿಯೂ ಪ್ರವೀಣ್ ತಂದೆ ಶಿವಪ್ಪ ಅವರು ಕುಸನೂರಲ್ಲಿರುವ ತಂಗಿ ಮನೆಗೆ ಹೋಗಿ ಹೆಣ್ಣು ಕೇಳಿದ್ದರು. ಆದರೆ ನೀಲಮ್ಮ ಅವರು ಪ್ರವೀಣ್‍ಗೆ ತಮ್ಮ ಮಗಳನ್ನು ಕೊಡಲು ನಿರಾಕರಿಸಿದ್ದರು. ಇದಾದ ನಂತರ ಜು.9 ರಂದು ರಾತ್ರಿ 11 ಗಂಟೆ ಸುಮಾರಿಗೆ ಶಹಾಬಾದ ರಸ್ತೆಯ ಧಾಬಾ ಹತ್ತಿರ ಪ್ರವೀಣ್ ಶವ ಪತ್ತೆಯಾಗಿದೆ. ಮಾರಕಾಸ್ತ್ರಗಳಿಂದ ಹೊಡೆದು ಪ್ರವೀಣ್‍ನನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು.
ಈ ಸಂಬಂಧ ನೀಲಮ್ಮ ಶ್ರೀಶೈಲ ತೆಗ್ಗಿನಮನಿ, ಮಲ್ಲಿಕಾರ್ಜುನ ತೆಗ್ಗಿಮನಿ ಮತ್ತು ಶಾರೂಖಾನ್ ವಿರುದ್ಧ ಕೊಲೆಯಾದ ಪ್ರವೀಣ್ ತಾಯಿ ಮಲ್ಲಮ್ಮ ಬಿರಾದಾರ ಅವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಕೊಲೆ ನಡೆದ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಚೇತನ್ ಆರ್., ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಶ್ವವಿದ್ಯಾಲಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ತೆಗ್ಗಿಮನಿ ಮತ್ತು ಶಾರೂಖಾನ್ ರನ್ನು ಬಂಧಿಸಿದ ಪೊಲೀಸರು ಅವರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.