ಮಟಕಾ: ಮೂವರ ಬಂಧನ
ಕಲಬುರಗಿ,ಜು.10-ನಗರದ ಮಕ್ತಂಪುರ ಸದ್ದಲಗಲ್ಲಿಯ ಸಾರ್ವಜನಿಕ ರಸ್ತೆ ಬದಿ ಮತ್ತು ನಗರ ಹೊರವಲಯದ ವಾಜಪೇಯಿ ಬಡಾವಣೆಯ ಹತ್ತಿರ ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮಕ್ತಂಪುರ ಸದ್ದಲಗಲ್ಲಿಯ ಸಾರ್ವಜನಿಕ ರಸ್ತೆ ಪಕ್ಕದಲ್ಲಿ ನಿಂತು ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಕಲಬುರಗಿ ಉತ್ತರ ಉಪ ವಿಭಾಗದ ಎ.ಎಸ್.ಪಿ.ಚಂದ್ರಶೇಖರ್, ಚೌಕ್ ಪೊಲೀಸ್ ಠಾಣೆ ಪಿಐ ರಾಘವೇಂದ್ರ, ಸಿಬ್ಬಂದಿಗಳಾದ ಸುರೇಶ್, ಅಂಬಾಜಿ, ಮೋಸಿನ್ ಅವರು ದಾಳಿ ನಡೆಸಿ ಛೋಟಾ ರೋಜಾ ಪಾಶಾಪುರದ ಸೈಯದ್ ಸಾಬೀರ್ ಎಂಬಾತನನ್ನು ಬಂಧಿಸಿ 4800 ರೂ. ಮತ್ತು ಮಹ್ಮದ್ ರಿಜವಾನ್ ಎಂಬಾತನನ್ನು ಬಂಧಿಸಿ 1010 ರೂ.ನಗದು, ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ನಗರ ಹೊರವಲಯದ ವಾಜಪೇಯಿ ಬಡಾವಣೆಯ ಹತ್ತಿರ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪಿಐ ಸುಶೀಲಕುಮಾರ, ಸಿಬ್ಬಂದಿಗಳಾದ ಅನೀಲ, ಮಂಜುನಾಥ, ಸುಲ್ತಾನ್ ಅವರು ದಾಳಿ ನಡೆಸಿ ಕಾಂತಾ ಕಾಲೋನಿಯ ಶಿವಾಜಿ ತಾತೆರಾವ ಸೂರ್ಯವಂಶಿ ಎಂಬಾತನನ್ನು ಬಂಧಿಸಿ 540 ರೂ.ನಗದು ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ.
ಚೌಕ್ ಮತ್ತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.