ಸೇವಾ ಸೌಲಭ್ಯ ನಿವೃತ್ತಿಯೊಂದಿಗೆ ಸೇರಿಸಿ ಕೊಡಲು ವಿಳಂಬ: ಪಾಲಿಕೆ ನಿವೃತ್ತ ನೌಕರರ ಬೇಸರ
ಕಲಬುರಗಿ,ಜು.10-ಮಹಾನಗರಪಾಲಿಕೆ ಮತ್ತು ಪೌರಾಡಳಿತ ನಿರ್ದೇಶನಾಲಯಗಳು ಪಾಲಿಕೆಯ ನಿವೃತ್ತ ನೌಕರರ ಸೇವಾ ಸೌಲಭ್ಯ ನಿವೃತ್ತಿಯೊಂದಿಗೆ ಸೇರಿಸಿ ಕೊಡದಿರುವುದರಿಂದ ಕಡಿಮೆ ಪಿಂಚಣಿಯಲ್ಲಿ ನಿವೃತ್ತ ನೌಕರರು ಸಂಕಷ್ಟ ಅನುಭವಿಸುತ್ತಿದ್ದಾರೆ, ಏಳೆಂಟು ವರ್ಷಗಳ ವಿಳಂಬದಿಂದ ಕೆಲವರು ಸೌಲಭ್ಯ ಅನುಭವಿಸದೆ ಮರಣವು ಹೊಂದಿದ್ದಾರೆ ಎಂದು ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘದ ಅಧ್ಯಕ್ಷ ವೀರಭದ್ರ ಸಿಂಪಿ ಪಾಲಿಕೆ ಮತ್ತು ನಿರ್ದೇಶನಾಲಯದ ವಿರುದ್ದ ತಮ್ಮ ಬೇಸರವನ್ನು ತೊಡಿಕೊಂಡರು.
ಎಂ.ಬಿ.ನಗರದ ಬಸವೇಶ್ವರ ಮಂದಿರದ ಆವರಣದಲ್ಲಿ ಮಂಗಳವಾರ ಜರುಗಿದ ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದಿನಗೂಲಿಯಿಂದ ಸಕ್ರಮಗೊಂಡ ನಿವೃತ್ತ ಅಧಿಕಾರಿಗಳು, ನೌಕರರು ಪೌರಕಾರ್ಮಿಕರು ಅರೇಳು ವರ್ಷಗಳಿಂದ ನಿವೃತ್ತರಾಗಿದ್ದರೂ ಇನ್ನೂ 248/ಎ ಅರ್ಹತಾದಾಯಕ ಸೇವೆ ಸೇರಿಸುತ್ತಿಲ್ಲ. ಈ ನಿಯಮವನ್ನೇ ಇತರೆ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದವರಿಗೆ ನಿವೃತ್ತಿಯೊಂದಿಗೆ ಅರ್ಹತಾದಾಯಕ ಸೇವೆ ಸೇರಿಸಿ ಕೊಟ್ಟು ಮುಕ್ತಗೊಳಿಸಲಾಗಿದೆ. ರಾಜ್ಯದ ಪಾಲಿಕೆಯಲ್ಲಿ ಸೇವೆ ಸಲ್ಲಿಸಿದವರಿಗೆ ಮಾತ್ರ ವಿಳಂಬಗೊಳಿಸಲಾಗುತ್ತಿದೆ. 248/ಎ ಮಂಜೂರಿಗಾಗಿ ವೈಯಕ್ತಿಕ ಅರ್ಜಿ ಸಲ್ಲಿಸಿ ಮೂರು ವರ್ಷಗಳಾದರೂ ಇನ್ನೂ ಕಡತಗಳಲ್ಲೇ ಅಲೆದಾಡಿಸುತಿದ್ದಾರೆ. ಸರಕಾರಿ ನಿಯಮಗಳು ಕಟ್ಟು ನಿಟ್ಟಿನಿಂದ ಜಾರಿಗೆ ತರುತ್ತಿಲ್ಲ. ಹಿರಿಯ ನಾಗರಿಕರು, ವಯೋಸಹಜ ಕಾಯಿಲೆಗಳಿಂದ ಬಳಲುವವರು ಅನಕ್ಷರಸ್ಥ ಪೌರಕಾರ್ಮಿಕರೆ ಹೆಚ್ಚಾಗಿರುವುದರಿಂದ ಪೌರ ಸೇವಾ ನಿವೃತ್ತ ನೌಕರರಿಗೆ ನ್ಯಾಯಯುತವಾಗಿ ಪರಿಗಣಿಸುತ್ತಿಲ್ಲವೆಂದು ಸಭೆಯ ಗಮನಹರಿಸಿದರು. ಸುಧೀರ್ಘವಾಗಿ ಚರ್ಚಿಸಿ ಈ ವಿಳಂಭಕ್ಕೆ ಇನ್ನೂಮ್ಮೆ ಮನವಿ ಸಲ್ಲಿಸಿ ಇದು ಸಹಿತ ವಿಳಂಬಗೊಳಿಸಿದರೆ ಅಂತವರ ವಿರುದ್ದ ರಾಜ್ಯ ಸರಕಾರ ಅಗತ್ಯ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಅಗಸ್ಟ 17 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಕೈಗೊಳ್ಳಲು ನಿರ್ಧರಿಸಲಾಯಿತು.
ಸಭೆಯಲ್ಲಿ ಸಿದ್ರಾಮ ಕರಣಿಕ, ಶಿವಾನಂದ ಯಳವಂತಗಿ, ಶ್ರೀಕಾಂತ್ ಶಟ್ಟಿ, ಅಕ್ರಮ ಅಹ್ಮದ, ಶಿವಶರಣಪ್ಪ ಮರಗೂಳ, ಎಚ್. ಸುಭಾಷ, ಮಹ್ಮದ ಶರಫೆÇೀದ್ಧಿನ,ರಾಮಚಂದ್ರ ರಡ್ಡಿ, ಸುಭಾಷ ದಿಗ್ಗಾಂವ,ಶಂಕರ ನಾಟಿಕಾರ, ಮಹಾದೇವಪ್ಪ ನಾಡೆಪಲ್ಲಿ,ಶರಣಪ್ಪ ವಗ್ದರ್ಗಿ, ರೀಯಾಜ ಅಹ್ಮದ,ಕಲ್ಯಾಣಪ್ಪ ಬಿರಾದಾರ, ಅವದೂತ ದೇಶಪಾಂಡೆ,ಮಹ್ಮದ ಹಾಜಿ, ಸುಭಾಷ ಕಿರಾಣಿ,ಜಗನ್ನಾಥ ಪಾಟೀಲ, ಈರಣ್ಣ ಕಳಗಂಟಿ ,ಕಮಲಾಬಾಯಿ ಸೇರಿದಂತೆ ಪದಾಧಿಕಾರಿಗಳು,ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.