ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸುವ ಕಾರ್ಯದಲ್ಲಿ ಎಬಿವಿಪಿ ಪಾತ್ರ ಹಿರಿದು: ಸಚಿನ ಕುಳಗೇರಿ
ವಿಜಯಪುರ,ಜು.10:ಯಾವುದೇ ರಾಷ್ಟ್ರೀಯ ಆಪತ್ತಿರಲಿ, ವಿದ್ಯಾರ್ಥಿಗಳಿಗೆ ಆಗುವ ಯಾವುದೇ ಅನ್ಯಾಯಗಳಿರಲಿ, ಸಾಮಾಜಿಕ ಅಸಮಾನತೆಯಿರಲಿ, ರಾಜ್ಯ ಮಟ್ಟದಿಂದ ದೇಶಮಟ್ಟದವರೆಗೂ ಎಚ್ಚರಿಸುವ ಧ್ವನಿಯಾಗಿ ಎಬಿವಿಪಿ ಕೆಲಸ ಮಾಡುವ ಮೂಲಕ ಮಹತ್ವದ ಪಾತ್ರ ವಹಿಸಿದೆ ಎಂದು ಎಬಿವಿಪಿ ಉತ್ತರ ಪ್ರಾಂತ ಕಾರ್ಯದರ್ಶಿ ಸಚಿನ ಕುಳಗೇರಿ ಹೇಳಿದರು.
ಶ್ರೀ ಸಿದ್ಧೇಶ್ವರ ಸಂಸ್ಥೆಯ ಕವಲಗಿ ಸಂಗನಬಸವ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 76ನೇ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ರಾಷ್ಟ್ರೀಯತೆ ಭಾವನೆ ಜಾಗೃತಗೊಳಿಸಿ ಇಡೀ ದೇಶವನ್ನೇ ಒಗ್ಗೂಡಿಸುವಲ್ಲಿ 1949 ರಿಂದ ಇಂದಿನವರೆಗೂ ಎಬಿವಿಪಿ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಹೇಮಂತಕೃಷ್ಣ ಅವರು ಮಾತನಾಡಿ, ಉತ್ತಮ ಪ್ರಜೆ, ದೇಶಪ್ರೇಮಿ ಎನಿಸಲು ಇಂತಹ ಸಂಘಟನೆಗಳು ಅತ್ಯಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹರ್ಷ ನಾಯಕ, ಸಂದೀಪ ಅರಳಗುಂಡಿ, ಸಂತೋಷ ದೇಸಾಯಿ ಉಪಸ್ಥಿತರಿದ್ದರು.
ಗಣಕ ಶಾಸ್ತ್ರ ಉಪನ್ಯಾಸಕ ಪ್ರಶಾಂತ ಪಾಟೀಲ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ದೀಪಾ ಪಿರಡ್ಡಿ ನಿರೂಪಿಸಿ, ವಂದಿಸಿದರು.
ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ (ಯತ್ನಾಳ), ಚೇರ್‍ಮನ್ ಬಸಯ್ಯ ಹಿರೇಮಠ, ನಿರ್ದೇಶಕರು ಹಾಗೂ ಪದಾಧಿಕಾರಿಗಳು ಶುಭ ಹಾರೈಸಿದರು.