ನಶಾ ಮುಕ್ತ ಭಾರತ ನಿರ್ಮಾಣವಾಗಲಿ: ನ್ಯಾಯವಾದಿ ದಾನೇಶ ಅವಟಿ
ವಿಜಯಪುರ,ಜು.10: ಹೆಂಡ, ಸಾರಾಯಿ, ಗಾಂಜಾ, ಚರಸ್, ತಂಬಾಕು ಮುಂತಾದ ಮಾದಕ ವಸ್ತುಗಳ ದಾಸರಾಗಿ ಲಕ್ಷಾಂತರ ಯುವಕರು ಹಾಳಾಗುತ್ತಿದ್ದು. ಈ ವ್ಯಸನದಿಂದ ಹೊರ ತರಲು ಸರ್ಕಾರ, ಕುಟುಂಬ ವರ್ಗ ನಿಗಾವಹಿಸಿ ಮಾರ್ಗದರ್ಶನ ಹಾಗೂ ತರಬೇತಿ ನೀಡಬೇಕು. ಕಟ್ಟುನಿಟ್ಟಿನ ಕಾನೂನು ಕ್ರಮಗಳಿಂದ ನಶಾಮುಕ್ತ ಭಾರತ ನಿರ್ಮಾಣವಾಗಲು ಎಲ್ಲರೂ ಕೈ ಜೋಡಿಸಬೇಕೆಂದು ನ್ಯಾಯವಾದಿ ದಾನೇಶ ಅವಟಿ ಕರೆ ನೀಡಿದರು.
ನಗರದ ಶಿಖಾರಖಾನೆಯ ಶ್ರೀ ಹನುಮಾನ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯೋಜನೆ ಬಿ. ಸಿ. ಟ್ರಸ್ಟ್ ನಂ.01 ವಿಜಯಪುರ ವತಿಯಿಂದ ಸೋಮವಾರ ಏರ್ಪಡಿಸಿದ್ದ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಕುತೂಹಲಕ್ಕಾಗಿ, ಒತ್ತಡಕ್ಕೆ ಒಳಗಾಗಿ, ಸ್ನೇಹಿತರ ಒತ್ತಾಯ ಎಲ್ಲರಲ್ಲೂ ಒಂದಾಗಬೇಕು ಎಂಬ ಮನೋಭಾವದಿಂದ ಹೆಚ್ಚಾಗಿ ವಿದ್ಯಾರ್ಥಿಗಳು ಈ ದುಶ್ಚಟಕ್ಕೆ ಬಲಿಯಾಗುತ್ತಿರುವುದು ಆಘಾತಕಾರಿ ವಿಷಯ. ಇದರಿಂದ ಭಾರತ ದೇಶದ ಭವಿಷ್ಯವಾದ ವಿದ್ಯಾರ್ಥಿಗಳು ದೈಹಿಕ ಮಾನಸಿಕ ಮತ್ತು ಭೌದ್ಧಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಸೂಕ್ತ ಆಪ್ತ ಸಮಾಲೋಚನೆ, ಔಷಧೋಪಚಾರ, ಉತ್ತಮ ವಾತಾವರಣ, ಒಳ್ಳೆಯ ಹವ್ಯಾಸಗಳ ಪೂರಕ ವಾತಾವರಣದಲ್ಲಿ ನಿಗಾವಹಿಸಿ ವ್ಯಸನದಿಂದ ಮಕ್ಕಳನ್ನು ಹೊರ ತರಲು ಪ್ರತಿಯೊಬ್ಬರೂ ಕಾಳಜಿ ವಹಿಸಬೇಕೆಂದರು.
ನೀರು ಉಳಿಸಿ ಕಾರ್ಯಕ್ರಮ ಜಿಲ್ಲಾ ಸಮನ್ವಯಾಧಿಕಾರಿ ಹನಮಂತ ಪಟವಾರಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ದೇಶದಲ್ಲಿ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ರಾಜ್ಯವು ಹೊರತಾಗಿಲ್ಲ. ಮಾದಕ ವಸ್ತುಗಳ ವ್ಯಸನಕ್ಕೆ ಕುಟುಂಬ. ವ್ಯಕ್ತಿಗತ ಜೀವನ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದ್ದು, ಮಾದಕ ದ್ರವ್ಯಗಳ ಹಂಚಿಕೆ, ಮಾರಾಟ, ಕಳ್ಳ ಸಾಗಾಣಿಕೆ ತಡೆಗೆ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯೋಪಾಧ್ಯಾಯ ಎ.ಎಸ್. ಮಾಡಗಿ, ಮಾದಕ ವಸ್ತುಗಳ ವ್ಯಸನ ಮಾನವ ಜನಾಂಗಕ್ಕೆ ಅಂಟಿದ ಶಾಪ. ಇದರಿಂದ ಹೆಚ್ಚಿನ ದುರಂತಗಳು ಸಂಭವಿಸುತ್ತಿವೆ. ಹೆಜ್ಜೆ ಹೆಜ್ಜೆಗೂ ಸಾರಾಯಿ, ತಂಬಾಕು ಮಾರಾಟ ಮಾಡುವ ಅಂಗಡಿ ಮುಂಗಟ್ಟುಗಳಿಗೆ ಸರ್ಕಾರ ಅವಕಾಶ ನೀಡಬಾರದು. ಸಮಾಜ. ಸಮುದಾಯ ಮುಖಂಡರು ಊರಿನಲ್ಲಿ. ಓಣಿಯ ಬೀದಿಗಳಲ್ಲಿ. ದೇವಸ್ಥಾನ ಪ್ರಾರ್ಥನಾ ಕೇಂದ್ರ ಶಾಲೆ ಕಾಲೇಜು ಪಕ್ಕದಲ್ಲಿ ಮಾರಾಟ ಮಾಡಲು ಅನುಮತಿ ನೀಡಬಾರದು. ಅವುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ಮಹಾನಂದ ಕೇಮಶಟ್ಟಿ, ರಾಜೇಶ್ವರಿ ಬಿಸನಾಳ, ರಜಿಯಾ ಇನಾಮದಾರ ಮಾತನಾಡಿದರು.
ಕಾರ್ಯಕ್ರಮ ಸಂಯೋಜಕಿ ಶ್ರೀದೇವಿ ಪರೀಟ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಗಂಗಾ ದೊಡ್ಡುರು ನಿರೂಪಿಸಿದರು. ಶಿಕ್ಷಕ ಎಸ್.ಆರ್. ಮಾದರ ವಂದಿಸಿದರು.