ಬಿಜೆಪಿ ಹೈಕಮಾಂಡ್ ವಿರುದ್ಧ ಸಂಸದ ಜಿಗಜಿಣಗಿ ಅಸಮಾಧಾನ
ವಿಜಯಪುರ,ಜು.10:ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ದೊರೆಯದೇ ಇರುವುದಕ್ಕೆ ಸಂಸದ ರಮೇಶ ಜಿಗಜಿಣಗಿ ಅವರು ಕೇಂದ್ರ ಬಿಜೆಪಿ ಹೈಮಾಂಡ್ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನದ ಮೇಲೆ ಆಸೆಯಿಲ್ಲ. ಆದರೆ ನಾನು ದೆಹಲಿಯಿಂದ ಸಚಿವ ಸ್ಥಾನವಿಲ್ಲದೆ ಬರೀಗೈಯಲ್ಲಿ ವಿಜಯಪುರಕ್ಕೆ ವಾಪಸ್ಸಾದಾಗ ಜನರು ನನಗೆ ಛೀ, ಥೂ ಎಂದು ಬೈದರು. ನನಗೆ ಸಚಿವ ಸ್ಥಾನದ ಮೇಲೆ ಆಸೆಯಿಲ್ಲ. ಜನರಿಗೋಸ್ಕರವಾದರೂ ನನಗೆ ಸಚಿವ ಖಾತೆ ನೀಡಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಮೊದಲೇ ಹೇಳಿದ್ದೇವು. ಬಿಜೆಪಿ ದಲಿತ ವಿರೋಧಿ ಇದೆ. ಬಿಜೆಪಿಗೆ ಸೇರಬೇಡಿ ಎಂದಿದ್ದೇವು. ಆದರೂ ನೀವು ಬಿಜೆಪಿಗೆ ಸೇರಿದ್ದೀರಿ. ಈಗ ಬಿಜೆಪಿ ದಲಿತ ವಿರೋಧಿ ನೀತಿ ಬಯಲಿಗೆ ಬಂದಿದೆ ಎಂದು ಬಹಳಷ್ಟು ಜನರು ಹೇಳುತ್ತಿದ್ದಾರೆ. ನನಗೋಸ್ಕರ ಅಲ್ಲದಿದ್ದರೂ ಜನರಿಗಾಗಿಯಾದರೂ ನನಗೆ ಸಚಿವ ಸ್ಥಾನ ನೀಡಬೇಕಿತ್ತು. ಇದರಿಂದ ನನಗೆ ಬೇಸರವಾಗಿದೆ ಎಂದು ನುಡಿದರು.
ದಕ್ಷಿಣ ಭಾರತದಲ್ಲಿ ದಲಿತನಾಗಿ ಬಿಜೆಪಿಯಿಂದ 7 ಚುನಾವಣೆಯಲ್ಲಿ ಲೋಕಸಭೆಗೆ ಆಯ್ಕೆಯಾದ ಏಕೈಕ ಸಂಸದನಾಗಿದ್ದೇನೆ. ಇದು ಎಂತಹ ಅನ್ಯಾಯ ನೀವೇ ಹೇಳಬೇಕು. ಎಲ್ಲರೂ ಮೇಲ್ವರ್ಗದವರೇ ಸಚಿವರಾಗಿದ್ದಾರೆ. ದಲಿತರು ಬಿಜೆಪಿಗೆ ಬೆಂಬಲಿಸಿಲ್ಲವಾ? ಎಂದು ಸಂಸದ ಜಿಗಜಿಣಗಿ ನೋವಿನಿಂದ ಹೇಳಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಹಗರಣ ಮಾಡುವುದು ಕಾಂಗ್ರೆಸ್ ಹುಟ್ಟು ಗುಣವಾಗಿದೆ. ಒಂದಲ್ಲ, ಎರಡಲ್ಲ. ಸಾಲು ಸಾಲು ಹಗರಣಗಳು ಬಯಲಿಗೆ ಬರುತ್ತಿವೆ. ಆದರೆ ಕೇಂದ್ರದ ಬಿಜೆಪಿ ಸರಕಾರದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಹಗರಣ ಮಾಡಿಲ್ಲ. ರಾಜ್ಯ ಕಾಂಗ್ರೆಸ್ಸಿನಲ್ಲಿ ಪ್ರತಿಯೊಬ್ಬ ಸಚಿವರು ಒಂದಿಲ್ಲ ಒಂದು ಹಗರಣದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಿಂದ ಕಾಂಗ್ರೆಸ್ ಬಣ್ಣ ಬಯಲಾಗಿದೆ. ಇಂಥ ಹಗರಣ ಇದುವರೆಗೂ ಇಡೀ ದೇಶದಲ್ಲಿಯೇ ನಡೆದಿಲ್ಲ. ಇವರಿಗೆ ದಲಿತರ ಹಣಾನೇ ಬೇಕಿತ್ತಾ? ಎಂದು ವಾಗ್ದಾಳಿ ನಡೆಸಿದರು.
ಖರ್ಗೆ ವಿರುದ್ಧ ಆರೋಪ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶಿವಮೊಗ್ಗದಲ್ಲಿ 60 ಎಕರೆ ಜಮೀನು ಹಂಚಿಕೆಯಾಗಿದೆ. ಕೋರ್ಟ್‍ನಲ್ಲಿ ಕೇಸ್ ಅಡ್ವರ್ಸ್ ಆಗಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ದಾಖಲೆ ನೀಡುತ್ತಾರೆ ಎಂದು ಹೇಳಿದರು.
ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ. ಬೇರೆ ದೇಶದಿಂದ ಫೈಯರ್ ಫೈಟರ್ ಬರಬೇಕಿದೆ. ಅದು ಬಂದ ತಕ್ಷಣ ಕಾಮಗಾರಿ ಮುಗಿಯಲಿದೆ. ಶೇ.99ರಷ್ಟು ಕೆಲಸ ಮುಗಿದಿದೆ ಎಂದು ತಿಳಿಸಿದರು.