ಸಾಂಕ್ರಾಮಿಕ ರೋಗಕ್ಕೆ ಮುನ್ನೆಚ್ಚರಿಕೆ ಅಗತ್ಯ: ಸಂತೋಷ ರೆಡ್ಡಿ
ಯಡ್ರಾಮಿ: ಜು.10:ಮಳೆಗಾಲ ಆರಂಭವಾಗಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದ್ದು ಪಟ್ಟಣ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಕುಮಾರ ರೆಡ್ಡಿ ತಿಳಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮಳೆ ನೀರು ಜಲಮೂಲಗಳಲ್ಲಿ ಸೇರಿಕೊಳ್ಳುವುದರಿಂದ ಸ್ವಲ್ಪ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ನೀರು ಕಾಯಿಸಿ,ಆರಿಸಿ ಕುಡಿಯಬೇಕು.
ಪಟ್ಟಣದ 12 ವಾರ್ಡ್‍ಗಳ ನಾಗರಿಕರು ತಮ್ಮ ಮನೆಗಳ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಚರಂಡಿಗಳಲ್ಲಿ ತ್ಯಾಜ್ಯ ಬಿದ್ದು ಭರ್ತಿಯಾಗಿದ್ದರೆ ಪಟ್ಟಣ ಪಂಚಾಯಿತಿ ಕಚೇರಿಗೆ ಮಾಹಿತಿ ನೀಡಿ ಎಂದು ಹೇಳಿದರು.
‘ನೀರಿನ ಮೂಲಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ವಾರಕ್ಕಿಂತ ಹೆಚ್ಚು ಒಂದೆಡೆ ನೀರಿನ ಶೇಖರಣೆಯಾದರೆ ಡೆಂಗಿ ಸೊಳ್ಳೆ ಉತ್ಪತ್ತಿಯಾಗುವ ಸಾಧ್ಯತೆ ಇದೆ. ನೀರಿನ ತೊಟ್ಟಿ, ಟೈರ್, ತೆಂಗಿನ ಚಿಪ್ಪುಗಳಲ್ಲಿ ನೀರು ಸಂಗ್ರಹಗೊಳ್ಳದಂತೆ ನೋಡಿಕೊಳ್ಳಿ.
ಮನೆ ಕಿಟಕಿಗಳಿಗೆ ಸೊಳ್ಳೆ ಪರದೆ ಅಳವಡಿಸಿ.ಯಾವುದೇ ಅನಾರೋಗ್ಯದ ಲಕ್ಷಣ ಕಂಡುಬಂದರೆ ಹತ್ತಿರದ ಆಸ್ಪತ್ರೆಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.