ನೀರು ಬಿಡದಿದ್ದರೆ ವಾಟರ್ ಮ್ಯಾನ್‌ಗಳ ವಿರುದ್ಧ ಕ್ರಮ
ಬೆಂಗಳೂರು, ಜು. ೧೦- :ಬೇಸಿಗೆಯಲ್ಲಿ ನೀರು ಕೊರತೆಯಾದರೂ ಯಶಸ್ವಿಯಾಗಿ ನಿಭಾಯಿಸಿದ್ದೀರಾ.. ಆದರೆ ಈಗ ಮಳೆಗಾಲದಲ್ಲಿ ಎಲ್ಲೂ ಕೂಡ ನೀರಿನ ಅಭಾವ ಆಗಬಾರದು. ವಾಟರ್ ಮ್ಯಾನ್‌ಗಳು ನೀರು ಬಿಡುವುದು ತಾರತಮ್ಯವೆಸಗಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಖ್ಯ ಎಂಜಿನಿಯರ್ ಪರಮೇಶ್ವರಪ್ಪ ಎಚ್ಚರಿಸಿದರು.
ಬಾಗಲಗುಂಟೆ ವಾರ್ಡ್‌ನ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿಯಲ್ಲಿ ನಡೆದ ಜಲಮಂಡಳಿ ಆಧಿಕಾರಿಗಳು ಹಾಗೂ ವಾಲ್ ಮ್ಯಾನ್‌ಗಳ ಸಭೆಯಲ್ಲಿ ಮಾತನಾಡಿದ ಅವರು ನಾಗರೀಕರ ಜೊತೆ ಸಂಘರ್ಷಕ್ಕೆ ಇಳಿಯದೇ ತಾಳ್ಮೆಯಿಂದ ವರ್ತಿಸಿ ನಿಮ್ಮ ನಿಮ್ಮ ಭಾಗಗಳಲ್ಲಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಿ ನಿಮ್ಮ ಜೊತೆ ನಾವಿದ್ದೇವೆ’ ಎಂದು ವಾಟರ್ ಮ್ಯಾನ್‌ಗಳಿಗೆ ಸಲಹೆ ನೀಡಿದರು.
ಶಾಸಕ ಎಸ್. ಮುನಿರಾಜು ಮಾತನಾಡಿ ‘ಪ್ರತಿನಿತ್ಯ ಕ್ಷೇತ್ರದ ಸಮಸ್ಯೆ ಆಲಿಸುವಾಗ ಅನಧಿಕೃತವಾಗಿ ನೀರು ಹರಿಸುತ್ತಿರುವುದು ಹಾಗೂ ಸರಿಯಾದ ಸಮಯಕ್ಕೆ ನೀರು ಬಿಡದೆ
ಅಲ್ಪಪ್ರಮಾಣದಲ್ಲಿ ಬಿಡುತ್ತಾರೆ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ವಾಲ್ ಮ್ಯಾನ್ ಗಳ ಮೇಲೆ ದೂರುಗಳು ಕೇಳಿ ಬರುತ್ತಿವೆ. ಇನ್ನು ಮುಂದೆ ಇವೆಲ್ಲವೂ ಕೊನೆಯಾಗಬೇಕು. ಇಲ್ಲದಿದ್ದರೆ ಆ ಜಾಗಕ್ಕೆ ಬೇರೊಬ್ಬರನ್ನೂ ನೇಮಕಮಾಡಲಾಗುವುದು’ ಎಂದರು.
ವಾಟರ್ ಮ್ಯಾನ್ ಗಳು ಸಾರ್ವಜನಿಕರ ಹತ್ತಿರ ಸಮಾಧಾನವಾಗಿ ಮಾತನಾಡಿ ಅವರ ಅತ್ತಿರ ಜಗಳವಾಡಲು ಹೋಗಬೇಡಿ ಎಂದು ವಾಟರ್ ಮ್ಯಾನ್‌ಗಳಿಗೆ ಕಿವಿಮಾತು ಹೇಳಿದರು. ನಿಮಗೆ ಏನಾದರೂ ತೊಂದರೆ ಆದರೆ ನಮ್ಮ ಗಮನಕ್ಕೆ ತನ್ನಿ ಸಮಸ್ಯೆಯನ್ನು ಬಗೆಹರಿಸುವಂತಹ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ನಗರದ ದಾಸರಹಳ್ಳಿ ಕ್ಷೇತ್ರ ವ್ಯಾಪ್ತಿಯ ಬಾಗಲಗುಂಟೆ ವಾರ್ಡ್‌ನ ಬಿಡಬ್ಲ್ಯುಎಸ್‌ಎಸ್‌ಬಿ ಕಚೇರಿಯಲ್ಲಿ ನಡೆದ ಜಲಮಂಡಳಿ ಅಧಿಕಾರಿಗಳ ಸಭೆಯಲ್ಲಿ ಶಾಸಕ ಎಸ್. ಮುನಿರಾಜು, ಮಂಡಳಿಯ ಮುಖ್ಯ ಎಂಜಿನಿಯರ್ ಪರಮೇಶ್ವರಪ್ಪ, ಹೆಚ್ಚುವರಿ ಮುಖ್ಯ ಎಂಜಿನಿಯರ್ ಬಿ.ಎಸ್. ದಲಾಯತ್ ಮತ್ತಿತರರು ಭಾಗವಹಿಸಿದ್ದರು.