ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸಲು ಸಂಸತ್ ನಲ್ಲಿ ಒತ್ತಾಯಿಸಲು ಸಂಸದರಿಗೆ ಮನವಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧೦; ಇಡೀ ದೇಶದ ರೈತರಿಗೆ ಎಂಎಸ್‌ಪಿ ದರದಲ್ಲಿ ಎಲ್ಲಾ ಬೆಳೆಗಳನ್ನು ಖರೀದಿಸಲು ಖಾತರಿ ಕಾನೂನು ರೂಪಿಸಬೇಕು ಮತ್ತು ಡಾ.ಸ್ವಾಮಿನಾಥನ್‌ ಆಯೋಗದ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಬೆಲೆಗಳನ್ನ ನಿಗದಿಪಡಿಸಬೇಕು ಎಂಬ ಅನೇಕ‌ ರೈತ ಬೇಡಿಕೆಗಳನ್ನು ಈಡೇರಿಸುವಂತೆ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕೆಂದು ಒತ್ತಾಯಿಸಿ   ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ ರಾಜ್ಯ ರೈತ ಸಂಘಗಳ ಒಕ್ಕೂಟ ಮನವಿ ಸಲ್ಲಿಸಿದೆ.ಈ ಬಗ್ಗೆ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮಾತನಾಡಿ ರೈತರು ಮತ್ತು ಕೂಲಿಕಾರರನ್ನು ಸಂಪೂರ್ಣ ಸಾಲದಿಂದ ಮುಕ್ತಗೊಳಿಸಬೇಕು.ಭೂಸ್ವಾಧೀನ ಕಾಯಿದೆ 2013 ಅನ್ನು ಇಡೀ ದೇಶದಲ್ಲಿ ಮರು ಜಾರಿಗೊಳಿಸಬೇಕು ಮತ್ತು ಭೂಸ್ವಾಧೀನಕ್ಕೂ ಮುನ್ನ ರೈತರ ಲಿಖಿತ ಒಪ್ಪಿಗೆ ಮತ್ತು ಜಿಲ್ಲಾಧಿಕಾರಿ ದರಕ್ಕಿಂತ 4 ಪಟ್ಟು ಪರಿಹಾರ ನೀಡುವ ನಿಬಂಧನೆಗಳನ್ನು ಜಾರಿಗೊಳಿಸಬೇಕು.ಲಖೀಂಪುರ ಖೇರಿ ಹತ್ಯಾಕಾಂಡದ ತಪ್ಪಿತಸ್ಥರನ್ನು ಶಿಕ್ಷಿಸಿ ಸಂತ್ರಸ್ತ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಹಾಗೂ 2020-21ರ ರೈತರ ಚಳವಳಿಯ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಬೇಕು ಎಂದರು.ಭಾರತವು ವಿಶ್ವ ವ್ಯಾಪಾರ ಒಪ್ಪಂದ ಸಂಸ್ಥೆಯಿಂದ ಹೊರಬರಬೇಕು ಮತ್ತು ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳನ್ನು ನಿಷೇಧಿಸಬೇಕು. 60 ವರ್ಷ ತುಂಬಿದ ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು.ಪ್ರಧಾನಮಂತ್ರಿ ಫಸಲ್ ಭೀಮ ಬೆಳೆ ವಿಮಾ ಯೋಜನೆಯಲ್ಲಿ ತಿದ್ದುಪಡಿಗಳನ್ನು ಮಾಡಬೇಕು ಮತ್ತು ಪ್ರೀಮಿಯಂ ಅನ್ನು ಸರ್ಕಾರವೇ ಪಾವತಿಸಬೇಕು.ವಿದ್ಯುತ್‌ ತಿದ್ದುಪಡಿ ಮಸೂದೆ 2020 ಅನ್ನು ರದ್ದುಗೊಳಿಸಬೇಕು.ಎಂ.ಎನ್.ಆರ್.ಜಿ.ವೈ. ಅಡಿಯಲ್ಲಿ, ವರ್ಷಕ್ಕೆ 200 ದಿನಗಳ ಉದ್ಯೋಗ, ರೂ 700 ವೇತನ ಭತ್ಯೆ ನೀಡಬೇಕು ಮತ್ತುಮನರೇಗಾ ಅನ್ನು ಕೃಷಿಯೊಂದಿಗೆ ಜೋಡಿಸಬೇಕು.ನಕಲಿ ಬಿತ್ತನೆ ಬೀಜಗಳು, ಕೀಟನಾಶಕಗಳು ಮತ್ತು ರಸಗೊಬ್ಬರಗಳನ್ನು ತಯಾರಿಸುವ ಕಂಪನಿಗಳಿಗೆ ಕಠಿಣ ಶಿಕ್ಷೆ ಮತ್ತು ದಂಡವನ್ನು ವಿಧಿಸಲು ನಿಬಂಧನೆಗಳನ್ನು ಮಾಡಬೇಕು ಮತ್ತು ಬೀಜಗಳ ಗುಣಮಟ್ಟವನ್ನು ಸುಧಾರಿಸಬೇಕು. ಮೆಣಸಿನಕಾಯಿ, ಅರಿಶಿನ ಮತ್ತು ಇತರ ಮಸಾಲೆಗಳಿಗೆ ರಾಷ್ಟ್ರೀಯ ಆಯೋಗವನ್ನು ರಚಿಸಬೇಕು.ಸಂವಿಧಾನದ ಐದು ಶೆಡ್ಯೂಲ್‌ಗಳನ್ನು ಜಾರಿಗೆ ತರಬೇಕು ಮತ್ತು ನೀರು, ಅರಣ್ಯ ಮತ್ತು ಭೂಮಿಯ ಮೇಲಿನ ಆದಿವಾಸಿಗಳ ಹಕ್ಕುಗಳನ್ನು ಖಾತ್ರಿಪಡಿಸುವ ಮೂಲಕ, ಕಂಪನಿಗಳಿಂದ ಆದಿವಾಸಿಗಳ ಭೂಮಿಯನ್ನು ಲೂಟಿ ಮಾಡುವುದನ್ನು ನಿಲ್ಲಿಸಬೇಕು. ಎಂಎಸ್‌ಪಿ ಖಾತರಿ ಕಾಯ್ದೆ, ಸ್ವಾಮಿನಾಥನ್ ಆಯೋಗದ ವರದಿ ಮತ್ತು ರೈತರ ಮತ್ತು ಕಾರ್ಮಿಕರ ಸಾಲ ಮನ್ನಾ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಖಾಸಗಿ ಮಸೂದೆಗಳನ್ನು ಮಂಡಿಸುವ ಜವಾಬ್ದಾರಿ ತಮ್ಮ ಮೇಲಿದೆ. ಇದರಿಂದ ರೈತರು ಮತ್ತು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬಹುದು ಎಂದು ಮನವರಿಕೆ ಮಾಡಿಕೊಟ್ಟರು. ನಿಯೋಗದಲ್ಲಿ ಮಾಯಕೊಂಡದ ಅಶೋಕ, ರಾಂಪುರದ ಬಸವರಾಜ,ಅಣಬೇರು ಕುಮಾರಸ್ವಾಮಿ,ಐಗೂರು ಶಿವಮೂರ್ತಪ್ಪ,ಪ್ರತಾಪ್ ಮಾಯಕೊಂಡ,ನಾಗರಕಟ್ಟೆ ಜಯನಾಯ್ಕ,ಹೆಬ್ಬಾಳ ರಾಜಯೋಗಿ,ಮಂಜುನಾಥ,ಕೋಗಳಿ ಮಂಜುನಾಥ್ ಇತರರಿದ್ದರು.