ಹರಿಹರದ ತುಂಗಭದ್ರಾ ನದಿಯ ದಂಡೆಯಲ್ಲಿ ನೀರುನಾಯಿಗಳು ಪ್ರತ್ಯಕ್ಷ

ಸಂಜೆವಾಣಿ ವಾರ್ತೆದಾವಣಗೆರೆ.ಜು.೯; ಮಲೆನಾಡು ಭಾಗಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ಇದೀಗ ನದಿಯಲ್ಲಿ ಅಪರೂಪದ ಪ್ರಾಣಿಗಳು ಕಾಣಿಸಿಕೊಂಡಿದ್ದು, ಅವುಗಳನ್ನು ಕಣ್ ತುಂಬಿಕೊಳ್ಳಲು ಜನರು ನದಿಯತ್ತ ಧಾವಿಸುತ್ತಿದ್ದಾರೆ. ಅವುಗಳ ಚೆಲ್ಲಾಟ ನೋಡಿ ಜನರೂ ಕೂಡ ಎಂಜಾಯ್ ಮಾಡುತ್ತಿದ್ದಾರೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದೀಗ ತುಂಗಭದ್ರಾ ನದಿಗೆ ಜೀವಕಳೆ ಬಂದಿದೆ. ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ನದಿಯಲ್ಲಿ ವಿಶೇಷವಾದ ನೀರುನಾಯಿಗಳು ಪ್ರತ್ಯಕ್ಷವಾಗಿವೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಜಾಕ್ ವೆಲ್ ಬಳಿ ನೀರುನಾಯಿಗಳ ಗುಂಪೊಂದು ಕಾಣಿಸಿಕೊಂಡಿದ್ದು ನೀರಿನಿಂದ ಹೊರ ಬಂದು ಚೆಲ್ಲಾಟವಾಡುತ್ತಿವೆ. ನದಿಯಲ್ಲೇ ವಾಸಿಸುವ ಈ ನೀರುನಾಯಿಗಳು, ನದಿಯಲ್ಲಿ ನೀರು ಹೆಚ್ಚಾದಾಗ ನೀರಿನಿಂದ ಹೊರ ಬಂದು  ಜನರಿಗೆ ದರ್ಶನ ನೀಡುತ್ತಿವೆ. ತೀರಾ ನಾಚಿಕೆ ಸ್ವಭಾವದ ನೀರು ನಾಯಿಗಳು ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಕಾಣಿಸಿಕೊಂಡಿದ್ದು, ಅವುಗಳನ್ನು ನೋಡಲು ಜನರು ಆಗಮಿಸುತ್ತಿದ್ದು, ನೀರಿನಾಯಿಗಳ ತುಂಟಾಟ ಕಂಡು ಸಖತ್ ಎಂಜಾಯ್ ಮಾಡುತ್ತಿದ್ದಾರೆ.ನದಿಯಲ್ಲಿ ಗಡಿಯನ್ನು ಗುರುತಿಸಿಕೊಂಡು ವಾಸಿಸುವ ಈ ನೀರುನಾಯಿಗಳೂ, ಐದರಿಂದ ಹತ್ತು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನೆಲೆಕಂಡುಕೊಳ್ಳುತ್ತವೆ. ನದಿಯ ತಟದಲ್ಲಿ ಬಿಲಗಳನ್ನು ನಿರ್ಮಿಸಿಕೊಂಡು ಮರಿಗಳಿಗೆ ಜನ್ಮ ನೀಡುವ ನೀರುನಾಯಿಗಳು ನದಿಯಲ್ಲಿರುವ ಕಲ್ಲುಬಂಡೆಗಳ ಸಂದುಗಳನ್ನು ಆವಾಸ ಸ್ಥಾನವನ್ನಾಗಿ  ಮಾಡಿಕೊಂಡಿರುತ್ತವೆ. ತುಂಗಭದ್ರಾ ನದಿಯ ಮೈದುಂಬಿ ಹರಿಯುತ್ತಿದ್ದು ಇದೀಗ ನದಿಯಲ್ಲಿ ನೀರು ನಾಯಿಗಳು ಈಜಾಡುತ್ತಿದ್ದು ನೋಡೋದೆ ಹಬ್ಬವಾಗಿದೆ… ಒಟ್ಟಿನಲ್ಲಿ ಕುಟುಂಬ ಸಮೇತ ತುಂಗಭದ್ರಾ ನದಿಯಲ್ಲಿ ಕಾಣಿಸಿಕೊಂಡಿರುವ ನೀರು ನಾಯಿಗಳು ಇದೀಗ ಎಲ್ಲರನ್ನ ತನ್ನತ್ತ ಆಕರ್ಷಿಸುತ್ತಿವೆ..ಅವುಗಳ ನೀರಾಟ ನೋಡುಗರ ಮನಸೂರೆಗೊಳ್ಳುತ್ತಿದೆ.